ಕಲಬುರಗಿ: ಗೌರವಾನ್ವಿತ ಉಚ್ಛ ನ್ಯಾಯಾಲಯ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಡಿಯಲ್ಲಿ (ದಿನಾಂಕ:12-07-2025ರಂದು) ಶನಿವಾರ ಕಲಬುರಗಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಜರುಗಿದ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಒಟ್ಟು 1,76,324 ಪ್ರಕರಣಗಳು ಇತ್ಯರ್ಥವಾಗಿದ್ದು, ಅವುಗಳಲ್ಲಿ 15,877 ಪೆಂಡಿಂಗ್ ಪ್ರಕರಣಗಳು ಹಾಗೂ 1,60,447 ವ್ಯಾಜ್ಯಪೂರ್ವ ಪ್ರಕರಣಗಳು ಇತ್ಯರ್ಥಗೊಂಡಿರುತ್ತವೆ ಎಂದು ಕಲಬುರಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀನಿವಾಸ್ ನವಲೆ ಅವರು ತಿಳಿಸಿದ್ದಾರೆ.
ಅದೇ ರೀತಿ ಜಿಲ್ಲೆಯಲ್ಲಿ 09 ಪ್ರಕರಣಗಳಲ್ಲಿ ಬೇರ್ಪಡೆಯಾಗಿದ್ದ ಪತಿ ಮತ್ತು ಪತ್ನಿಯರನ್ನು ಒಂದುಗೂಡಿಸಲಾಯಿತು. 10 ವರ್ಷಗಳಿಗಿಂತ ಹೆಚ್ಚಿನ ಅವಧಿಯ 01 ಪ್ರಕರಣ, 05 ವರ್ಷಗಳಿಗಿಂತ ಹೆಚ್ಚಿನ ಅವಧಿಯ 05 ಪ್ರಕರಣಗಳನ್ನು ರಾಜಿ ಮಾಡಿಸಿದ್ದು, ಈ ಮೂಲಕ ಕಲಬುರಗಿ ಜಿಲ್ಲೆಯಲ್ಲಿ ಮೆಗಾ ಲೋಕ್ ಅದಾಲತ್ ಅದ್ಭುತ ಯಶಸ್ಸನ್ನು ಕಂಡಿರುತ್ತದೆ.
ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ.ಎಲ್. ಲಕ್ಷ್ಮೀನಾರಾಯಣ ಸೇರಿದಂತೆ ಜಿಲ್ಲೆಯ ಎಲ್ಲಾ ನ್ಯಾಯಾಧೀಶರು, ನ್ಯಾಯವಾದಿಗಳು, ಸಾರ್ವಜನಿಕರು ಹಾಗೂ ಕಕ್ಷಿದಾರರ ಸಹಕಾರದಿಂದ ರಾಷ್ಟ್ರೀಯ ಲೋಕ್ ಅದಾಲತ್ ಮೂಲಕ ಸಿವಿಲ್ ದಾವೆಗಳು, ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು, ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು, ಚೆಕ್ ಪ್ರಕರಣಗಳು, ಭೂಸ್ವಾಧೀನ ಪರಿಹಾರ ವಸೂಲಾತಿ ಪ್ರಕರಣಗಳು ಹಾಗೂ ಬ್ಯಾಂಕ್‍ಗಳಿಗೆ ಸಂಬಂಧಿಸಿದ ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಶನಿವಾರ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಈ ರಾಷ್ಟ್ರೀಯ ಲೋಕ್‍ಅದಾಲತ್ ಹಮ್ಮಿಕೊಳ್ಳಲಾಗಿತ್ತು.
ಈ ಲೋಕ ಅದಾಲತ್‍ನಲ್ಲಿ ಕಕ್ಷಿದಾರರು, ನ್ಯಾಯಾಧೀಶರು, ಸಂಧಾನಕಾರರು ಹಾಗೂ ಸಂಬಂಧಪಟ್ಟ ನ್ಯಾಯವಾದಿಗಳು ರಾಜೀ ಸಂಧಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.