ಕಲಬುರಗಿ: ನಿಪುಣ ಕರ್ನಾಟಕ ಅಡಿಯಲ್ಲಿ ಸ್ಟೆಮ್ ಅಭ್ಯರ್ಥಿಗಳಿಗೆ ಶನಿವಾರ ಕಲಬುರಗಿ-ಶಹಾಬಾದ ರಸ್ತೆಯ ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಸಂಸ್ಥೆಯಲ್ಲಿ ಸೈಕೋಮೆಟ್ರಿಕ್ ಅಸೆಸ್ಮೆಂಟ್ ಮತ್ತು ಟೆಕ್ನಿಕಲ್ ಅಸೆಸ್ಮೆಂಟ್ ಆನ್ಲೈನ್ ಮೌಲ್ಯಮಾಪನ ಪರೀಕ್ಷೆ ಯಶಸ್ವಿಯಾಗಿ ನಡೆದಿದ್ದು, ಸುಮಾರು 500 ಕ್ಕೂ ಹೆಚ್ಚಿನ ಅಭ್ಯರ್ಥಿಗಳು ಭಾಗವಹಿಸಿದ್ದರು.
ರಾಜ್ಯದ ಟೈಯರ್ 2 ಮತ್ತು ಟೈಯರ್ 3 ನಗರಗಳಲ್ಲಿ ಪದವೀಧರರಲ್ಲಿ ಹೆಚ್ಚುತ್ತಿರುವ ಉದ್ಯೋಗಾವಕಾಶದ ಅಂತರವನ್ನು ಪರಿಹರಿಸಲು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮೂಲಕ ಈ ಪರೀಕ್ಷೆ ನಡೆಸಲಾಗಿದ್ದು, ಅನ್ಸ್ಟಾಪ್ ಸಂಸ್ಥೆ ಸಂಪೂರ್ಣ ಪರೀಕ್ಷೆಯ ನಿರ್ವಹಣೆ ಕೈಗೊಂಡಿತ್ತು.
ಕಳೆದ ಏಪ್ರಿಲ್ ಮಾಹೆಯಲ್ಲಿ ಕಲಬುರಗಿಯಲ್ಲಿ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಭೌತಿಕವಾಗಿ ಹಾಜರಾದ 10 ಸಾವಿರ ಅಭ್ಯರ್ಥಿಗಳ ಪೈಕಿ ಆಯ್ದ 2,500 ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಪದವೀಧರರನ್ನು ಗುರಿಯಾಗಿಸಿ ಈ ಮೌಲ್ಯಾಮಾಪನ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆ ನಂತರ ಅವರ ಕೌಶಲ್ಯ ಕೊರತೆಯನ್ನು ಪತಗತೆ ಹಚ್ಚಿ ಅಗತ್ಯ ಕೌಶಲ್ಯ ನೀಡಿ ಅವರನ್ನು ಉದ್ಯೋಗಕ್ಕೆ ಸಿದ್ಧರನ್ನಾಗಿ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.
ಸಾಂಪ್ರದಾಯಿಕ ಕೌಶಲ್ಯ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ ಪ್ರತಿಯೊಬ್ಬ ಅಭ್ಯರ್ಥಿಯ ಅರ್ಹತೆ, ಸಂವಹನ, ಡಿಜಿಟಲ್ ಸಾಕ್ಷರತೆ ಮತ್ತು ನಡವಳಿಕೆಯ ಸಿದ್ಧತೆಯನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ 90 ನಿಮಿಷಗಳ ಕಾಲ ಮೌಲ್ಯಮಾಪನ ಮಾಡಲಾಗುತ್ತದೆ. ಈ ಉಪಕ್ರಮವು ವಿದ್ಯಾರ್ಥಿಗಳಿಗೆ ಫಲಿತಾಂಶಗಳನ್ನು ಸುಧಾರಿಸುವುದಲ್ಲದೆ, ಉದ್ಯೋಗದಾತರಿಗೆ ಉದ್ಯೋಗ-ಸಿದ್ಧ ಅಭ್ಯರ್ಥಿಗಳನ್ನು ಸಜ್ಜುಗೊಳಿಸುತ್ತದೆ ಮತ್ತು ಶಿಕ್ಷಣ ಸಂಸ್ಥೆಗಳು ನಿಜವಾದ ಉದ್ಯಮದ ಬೇಡಿಕೆಗಳೊಂದಿಗೆ ತರಬೇತಿಯನ್ನು ಹೊಂದಿಸಲು ಸಹಾಯ ಮಾಡುತ್ತದೆ.
ಆಗಸ್ಟ್ 10 ರಂದು ಸಹ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆ ವರೆಗೆ ನಾಲ್ಕು ಸ್ಲಾಟ್ ಗಳಲ್ಲಿ ಮೌಲ್ಯಾಮಾಪನ ಪರೀಕ್ಷೆ ನಡೆಯಲಿದ್ದು, ಬಿ.ಎಸ್.ಸಿ, ಎಂ.ಸಿ.ಎ, ಬಿ.ಕಾಂ, ಇಂಜಿನೀಯರಿಂಗ್, ಡಿಪ್ಲೋಮಾ ಪಧವಿಧರರು ಭಾಗವಹಿಸಲು
https://unstop.com/o/xvCVUWP/?ref=KalaburgiAssessment, https://unstop.com, www.karnatakadigital.in ಹಾಗೂ
https://unstop.com/o/xvCVUWP/?ref=KalaburgiAssessment. ಅಂತರ್ಜಾಲದ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ನೊಂದಣಿ ಮಾಡಿಕೊಳ್ಳದವರು ಸಹ ನೇರವಾಗಿ ಸಂಸ್ಥಗೆ ಅವಧಿಗೆ ಮುನ್ಮ ಬಂದು ನೋಂದಣಿ ಮಾಡಿಕೊಂಡು ಪರೀಕ್ಷೆಯಲ್ಲಿ ಹಾಜರಾಗಬಹುದಾಗಿದೆ.
ಶನಿವಾರ ಪರೀಕ್ಷೆ ನಡೆದ ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಸಂಸ್ಥೆಗೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ವರ್ಷಾ ಜಾನೆ ಭೇಟಿ ನೀಡಿ ಪರೀಕ್ಷೆ ಪ್ರಕ್ರಿಯೆ ವೀಕ್ಷಿಸಿದರು. ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ನಾಗುಬಾಯಿ, ಪ್ರಮುಖರಾದ ಡಾ.ಕಿರಣ ದೇಶಮುಖ, ಶಿಬಾ ಮೆಹತಾ ಸೇರಿದಂತೆ ಮುಂತಾದವರು ಇದ್ದರು.