ಕಲಬುರಗಿ: ಜಿಲ್ಲೆಯಲ್ಲಿ ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಸುಮಾರು 3 ಎಕರೆ ಜಮೀನು ಹೊಂದಿರುವ ರೈತ ಬೆಳೆ ಸಾಲ ಮಾಡಿಕೊಂಡಿದ್ದ. ಆದರೆ ಬೆಳೆ ಮಳೆಯಿಂದ ನಷ್ಟವಾಗಿದೆ.
ಫರಹತಾಬಾದ್ ಹೋಬಳಿ ವ್ಯಾಪ್ತಿಯ ಕವಲಗಾ ಬಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ನಿವಾಸಿ ಹಣಮಂತ ತಂದೆ ಬಸವರಾಜ ಮೊಸಂಡಿ (35) ಆತ್ಮಹತ್ಯೆ ಮಾಡಿಕೊಂಡ ರೈತ ಎಂದು ತಿಳಿದುಬಂದಿದೆ.
ರೈತ 3 ಎಕರೆ ಜಮೀನು ಹೊಂದಿದ್ದು, ಫರಹತಬಾದ್ ಬ್ಯಾಂಕ್ ಆಫ್ ಬರೋಡ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ 2 ಲಕ್ಷ ರೂ. ಬೆಳೆ ಸಾಲ ಮಾಡಿದ್ದ. ಕೃಷಿಗಾಗಿ ಖಾಸಗಿ ಸಾಲ 35,0000 ಸೇರಿ ಒಟ್ಟು ಏಳುವರೆ ಲಕ್ಷ ಸಾಲ ಮಾಡಿಕೊಂಡಿದ್ದ.
ಸದ್ಯ ಹತ್ತಿ ಮತ್ತು ತೊಗರಿ ಬೆಳೆದಿದ್ದ. ಆದರೆ ಅತಿಯಾದ ಮಳೆ ನೀರಿನಿಂದ ಬೆಳೆ ಕೊಚ್ಚಿಕೊಂಡು ಹೋಗಿದೆ. ಆದ್ದರಿಂದ ಬಾವಿಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ರೈತ ಒಂದು ಗಂಡು ಮಗು, ಪತ್ನಿಯನ್ನು ಅಗಲಿದ್ದಾರೆ. ಸ್ಥಳಕ್ಕೆ ಫರಹತಬಾದ್ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಪರಿಶೀಲನೆ ಕಾರ್ಯ ನಡೆಯುತ್ತಿದೆ.
ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮ್ಮಶೆಟ್ಟಿ, ರಾಯಪ್ಪ ಹುರಮುಂಜಿ ಆಗ್ರಹಿಸಿದ್ದಾರೆ.