ಕಲಬುರಗಿ: ಭೀಮಾ ನದಿಯಲ್ಲಿ ಈಜಲು ಹೋದ 14 ವರ್ಷದ ಬಾಲಕ ನಾಪತ್ತೆಯಾಗಿರುವ ಘಟನೆ ಜೇವರ್ಗಿ ತಾಲೂಕಿನ ಕೂಟನೂರ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಎಂಟನೇ ತರಗತಿ ಓದುತ್ತಿರುವ ಜೇವರ್ಗಿ ತಾಲೂಕಿನ ಕೂಟನೂರ್ ಗ್ರಾಮದ ಮೌನೇಶ್ ಸಿದ್ದರಾಮ್ ತುರಾಯಿ (14) ನಾಪತ್ತೆಯಾಗಿರುವ ಬಾಲಕ ಎಂದು ಗುರುತಿಸಲಾಗಿದೆ.
ಸೋಮವಾರ ಮನೆಯವರೆಲ್ಲ ಹೊಲಕ್ಕೆ ಹೋದ ಕಾರಣ, ಮೌನೇಶ್ ಕೂಡ ಹೊಲಕ್ಕೆ ಹೋಗಿ ಭೀಮಾ ನದಿಯ ದಡದಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದಾನೆ ಎನ್ನಲಾಗುತ್ತಿದೆ. ಸಿದ್ದರಾಮ ತುರಾಯ ಅವರಿಗೆ ಮೂರು ಮಕ್ಕಳಿದ್ದು ಅದರಲ್ಲಿ ಎರಡನೇ ಮಗ ಮೌನೇಶ್ ಈಜಲು ಹೋಗಿ ಮೃತಪಟ್ಟಿರುವುದಾಗಿ ಶಂಕಿಸಲಾಗುತ್ತಿದೆ.
ಸ್ಥಳಕ್ಕೆ ನೆಲೋಗಿ ಠಾಣೆಯ ಪೊಲೀಸರು ಹಾಗೂ ಜೇವರ್ಗಿ ಅಗ್ನಿಶಾಮಕ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಮೃತದೇಹಕ್ಕಾಗಿ ಶೋಧನಾ ಕಾರ್ಯ ನಡೆಯುತ್ತಿದೆ.