ಕಲಬುರಗಿ: ಶನಿವಾರ ಬೆಳಗಿನ ಜಾವದಿಂದಲೇ ಕಲಬುರಗಿಯ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ಕೊಟ್ಟಿದ್ದು, ವಿವಿಧೆಡೆ ಪರಿಶೀಲನೆ ನಡೆಸುತ್ತಿದ್ದಾರೆ. ಬಳ್ಳಾರಿ ಪಿಡಬ್ಲುಡಿ (ಸಾರ್ವಜನಿಕ ಕಾರ್ಯಗಳ ಇಲಾಖೆ) ವೃತ್ತ ಕಚೇರಿಯ ಎಸ್.ಇ (ಕಾರ್ಯನಿರ್ವಹಣಾ ಇಂಜಿನಿಯರ್) ಅಮಿನ್ ಮುಕ್ತಾರ್ ಅವರ ವಿರುದ್ದ ಆದಾಯಕ್ಕಿಂತ ಹೆಚ್ಚಾಗಿ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ, ಕಲಬುರಗಿ ನಗರ ಅವರ ನಿವಾಸದ ಮೇಲೆ ಲೋಕಾಯುಕ್ತ ದಳದಿಂದ ದಾಳಿ ನಡೆದಿದೆ.
ಕಲಬುರಗಿ ನಗರದ ಹುಸೇನ್ ಗಾರ್ಡನ್ ಪ್ರದೇಶದಲ್ಲಿರುವ ಅವರ ನಿವಾಸ, ಏಷಿಯನ್ ಮಾಲ್‌ನಲ್ಲಿರುವ ಅಪಾರ್ಟ್‌ಮೆಂಟ್, ಮತ್ತು ಅವರ ಸಹೋದರ ಡಾ. ಆರೀಫ್‌ರ ಏಷಿಯನ್ ಲೈಫ್‌ಸ್ಟೈಲ್ ಅಪಾರ್ಟ್‌ಮೆಂಟ್ ಸೇರಿ ಹಲವೆಡೆ ತನಿಖೆ ನಡೆಯುತ್ತಿದೆ. ದಾಳಿ ಸಂದರ್ಭದಲ್ಲಿ ಅಮಿನ್ ಮುಕ್ತಾರ್ ಅವರು ಮನೆಯಲ್ಲಿಯೇ ವಾಸ್ತವ್ಯವಿರೂವುದು ತಿಳಿದು ಬಂದಿದೆ.
ಇದೇ ಪ್ರಕರಣದ ಹಿನ್ನೆಲೆಯಲ್ಲಿ ಕಲಬುರಗಿ ಮಾತ್ರವಲ್ಲದೇ, ಬಳ್ಳಾರಿ ಹಾಗೂ ಬಸವಕಲ್ಯಾಣದಲ್ಲೂ ದಾಳಿ ನಡೆದಿದೆ. ಅಮಿನ್ ಮುಕ್ತಾರ್ ಅವರು ಈ ಮೂರು ನಗರಗಳಲ್ಲಿ ಮನೆ ಹಾಗೂ ವಿವಿಧ ಆಸ್ತಿಗಳನ್ನು ಹೊಂದಿದ್ದಾಗಿ ಶಂಕಿಸಲಾಗಿದೆ. ಇದನ್ನಿಟ್ಟುಕೊಂಡು ಕಲಬುರಗಿ ಹಾಗೂ ಬಳ್ಳಾರಿಯ ಲೋಕಾಯುಕ್ತ ಅಧಿಕಾರಿಗಳಿಂದ ಜಂಟಿ ಪರಿಶೀಲನೆ ಪ್ರಾರಂಭವಾಗಿದೆ.