ಕಲಬುರಗಿ: ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರವಾಸಿ ಮಿತ್ರ ಯೋಜನೆಯಡಿ 40 ಪ್ರವಾಸಿ ಮಿತ್ರರಿಗೆ ಸಮವಸ್ತ್ರವನ್ನು ವಿತರಣೆ ಮಾಡಿದರು.
ಪ್ರವಾಸಿಗರ ಸುರಕ್ಷತೆ, ಭದ್ರತೆ ಹಾಗೂ ಪ್ರವಾಸಿ ತಾಣಗಳ ಸಂರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ತರಬೇತಿ ಪಡೆದ ಗೃಹರಕ್ಷಕ ಸಿಬ್ಬಂದಿಗಳನ್ನು ಕಲಬುರಗಿ ಜಿಲ್ಲೆಯ ಪ್ರವಾಸಿತಾಣಗಳಲ್ಲಿ ಪ್ರವಾಸಿ ಮಿತ್ರ (ಟೂರಿಸ್ಟ್ ಪೊಲೀಸ್) ಹೆಸರಿನಡಿ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿದ್ದು, ಪ್ರವಾಸಿಗರಿಗೆ ಪ್ರವಾಸಿ ಮಿತ್ರರನ್ನು ಗುರುತಿಸಲು ಅನುಕೂಲವಾಗುವಂತೆ ಪ್ರವಾಸೋದ್ಯಮ ಇಲಾಖೆಯ ಅನುದಾನದಡಿ ಇಂದಿಲ್ಲಿ ಸಮವಸ್ತ್ರ ವಿತರಿಸಲಾಯಿತು.
ಕಲಬುರಗಿ ಜಿಲ್ಲೆಯ ಪ್ರವಾಸಿ ತಾಣಗಳಾದ ಶ್ರೀಶರಣಬಸವೇಶ್ವರ ದೇವಸ್ಥಾನ, ಬುದ್ದ ವಿಹಾರ, ಕಲಬುರಗಿ ಕೋಟೆ, ಪ್ರಾಣಿ ಸಂಗ್ರಹಾಲಯ, ಪ್ರಾಚ್ಯ ವಸ್ತು ಸಂಗ್ರಹಾಲಯ, ಘತ್ತರಗಿ ಭಾಗ್ಯವಂತಿ ದೇವಸ್ಥಾನ, ಗಾಣಗಾಪೂರ ದತ್ತ ದೇವಸ್ಥಾನ, ಲಾಡ್ಲೆ ಮಶಾಕ್ ದರ್ಗಾ, ಮಳಖೇಡ ಕೋಟೆ, ಚಂದ್ರಂಪಳ್ಳಿ ಜಲಾಶಯ ಹೀಗೆ ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಲಾದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿ ಮಿತ್ರ ಯೋಜನೆಯಡಿ ತರಬೇತಿ ಪಡೆದ 48 ಪ್ರವಾಸಿ ಮಿತ್ರ ಸಿಬ್ಬಂದಿಗಳನ್ನು ಹಂತ ಹಂತವಾಗಿ ದೇಶಿ ಹಾಗೂ ವಿದೇಶಿಯ ಪ್ರವಾಸಿಗರ ಸೂಕ್ತ ಭದ್ರತೆಗೆ ನಿಯೋಜಿಸಲಾಗುತ್ತಿದೆ.
2015ರಲ್ಲಿ ಪ್ರಾರಂಭವಾದ ಈ ಯೋಜನೆಯುಡಿ ಗೃಹ ರಕ್ಷಕದಳದ ಅರ್ಹ ಸಿಬ್ಬಂದಿಯನ್ನು ಆಯ್ಕೆ ಮಾಡಿ ಒಂದು ತಿಂಗಳುಗಳ ಕಾಲ ಪ್ರವಾಸಿ ತಾಣಗಳ ಕುರಿತು, ಪ್ರವಾಸಿಗರೊಂದಿಗೆ ಸೌಜನ್ಯದಿಂದ ವರ್ತನೆ ಹಾಗೂ ಪೊಲೀಸ ನಿಯಮಾವಳಿಗಳಾದಿಯಾಗಿ ವಿಶೇಷ ತರಬೇತಿ ನೀಡಲಾಗಿದೆ.
ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕರಾದ ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರ, ಕಲಬುರಗಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ಡಾ.ತಿಪ್ಪೆಸ್ವಾಮಿ, ಉಪನಿರ್ದೇಶಕಿ ಬೇಬಿ ಮೋಗೇರ್, ಸಹಾಯಕ ಅಭಿಯಂತ ಯೋಗೇಶ ಅಣದೂರೆ ಸೇರಿದಂತೆ ಮತ್ತಿತರರು ಇದ್ದರು.