ಕಲಬುರಗಿ: ಕಲಬುರಗಿ ನಗರದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಿಸಲಾಗುತ್ತಿರುವ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿ ಕೇಂದ್ರಕ್ಕೆ (ನೈಸ್ ಅಕಾಡೆಮಿ)ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮಂಗಳವಾರ ಭೇಟಿ ನೀಡಿ, ಕಾಮಗಾರಿಯ ಅಂತಿಮ ಹಂತದ ಕೆಲಸ ಕಾರ್ಯಗಳನ್ನು ಪರಿಶೀಲಿಸಿದರು.
ಉಳಿದ ಕಾಮಗಾರಿಗಳನ್ನು ಬೇಗ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಕಾಮಗಾರಿ ಪೂರ್ಣಗೊಂಡಲ್ಲಿ ಇದನ್ನು ಲೋಕಾರ್ಪಣೆಗೊಳಿಸಿ ಪ್ರದೇಶದ ಯುವಕರಿಗೆ ಪರೀಕ್ಷಾ ಪೂರ್ವ ತರಬೇತಿ ಪಡೆಯಲು ಸಹಾಯವಾಗಲಿದೆ ಎಂದರು.
ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ತರಬೇತಿ ಕೇಂದ್ರ ನಿರ್ಮಾಣವಾಗುತ್ತಿದೆ. ತರಬೇತಿ ಕೇಂದ್ರದಲ್ಲಿ ಪ್ರಾರಂಭಿಕ 500 ರಿಂದ ಆರಂಭಿಸಿ ಗರಿಷ್ಠ ವಾರ್ಷಿಕ 2,000 ಜನ ವಿದ್ಯಾರ್ಥಿಗಳಿಗೆ ಐ.ಎ.ಎಸ್, ಐ.ಪಿ.ಎಸ್, ಕೆ.ಎ.ಎಸ್, ಬ್ಯಾಂಕಿಂಗ್ ಸೇರಿದಂತೆ ಇತರೆ ಪರೀಕ್ಷೆಗಳ ಪರೀಕ್ಷಾ ಪೂರ್ವ ತರಬೇತಿ ಇಲ್ಲಿ ನೀಡಲಾಗುತ್ತಿದೆ. ಸಕಲ ಸೌಲಭ್ಯವುಳ್ಳ ಉತ್ತಮ ಬೋಧನಾ ಕೊಠಡಿ, ಕಂಪ್ಯೂಟರ್ ಕೋಣೆ, ವಸತಿ ನಿಲಯಗಳನ್ನು ಇದು ಒಳಗೊಂಡಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ಕಲಬುರಗಿ ತಹಶೀಲ್ದಾರ ಕೆ. ಆನಂದಶೀಲ ಸೇರಿದಂತೆ ಮತ್ತಿತರ ಅಧಿಕಾರಿಗಳು ಇದ್ದರು.