ಕಲಬುರಗಿ: ಕಳೆದ ಜೂನ್ 22 ರಂದು ಶಹಾಬಾದ ನಗರದ ಮನೆಯೊಂದರಲ್ಲಿ ನಡೆದ 15.26 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಂತರ್ ರಾಜ್ಯ ದರೋಡೆಕೋರರನ್ನು ಬಂಧಿಸಿ, ಅವರಿಂದ 8.95 ಲಕ್ಷ ಮೌಲ್ಯದ ಆಭರಣ, ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ 05 ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ
ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಹಾಬಾದ್ ಧಕ್ಕಾ ತಾಂಡಾದ ನಿವಾಸಿ ರವಿ ಶಂಕರ್ ರಾಠೋಡ್ (42), ಮಹಾರಾಷ್ಟ್ರದ ಅಕ್ಕಲಕೋಟ್ ನ ಶಿವಾಜಿ ನಗರ ತಾಂಡಾದ ಮಹಾದೇವ ಉಮಲು ರಾಠೋಡ್(28), ಖ್ಯಾದಾಪುರ ತಾಂಡಾದ ಶಿವುಕುಮಾರ ದೀಪಲು ರಾಠೋಡ್(25) ಹಾಗೂ ಆಣಗೇರಿ ತಾಂಡಾದ ಗೋಪಾಲ ಮೇಘು ನಾಯಕ್(30) ಬಂಧಿತ ಆರೋಪಿಗಳಗಿದ್ದು, ಇನ್ನೋರ್ವ ಆರೋಪಿ ಅಕ್ಕಲಕೋಟ್ ನ ಶಿವಾಜಿ ನಗರ ತಾಂಡಾದ ನಿವಾಸಿ ಸುನೀಲ್ ಬಾಬು ರಾಠೋಡ್ ಎಂಬಾತ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗೆ ಜಾಲ ಬೀಸಲಾಗಿದೆ ಎಂದರು.
ಬಂಧಿತ ನಾಲ್ವರು ದರೋಡೆಕೋರರಿಂದ 135 ಗ್ರಾಂ ಚಿನ್ನ, 550 ಗ್ರಾಂ ಬೆಳ್ಳಿ, 40 ಸಾವಿರ ರೂಪಾಯಿ ನಗದು ಹೀಗೆ ಒಟ್ಟು 15 ಲಕ್ಷ 26 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಹಾಗೂ ಕೃತ್ಯಕ್ಕೆ ಬಳಸಿದ 05 ಚಾಕುಗಳನ್ನು ಕರ್ನಾಟಕ ಗಡಿ ಭಾಗದ ಅಕ್ಕಲಕೋಟ ರಾಷ್ಟ್ರೀಯ ಹೆದ್ದಾರಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ದರೋಡೆ ಪ್ರಕರಣದಲ್ಲಿ ಭಾಗಿಯಾದ ರವಿ ತಂದೆ ಶಂಕರ ರಾಠೋಡ 42 ದಕ್ಕಾ ತಾಂಡಾ ಶಹಾಬಾದ ಈತನ ಮೇಲೆ ಜೇವರ್ಗಿ ಮತ್ತು ಇತರೆ ಕಡೆಗಳಲ್ಲಿ ದರೋಡೆ ಮಾಡಿದ ಬಗ್ಗೆ ಪ್ರಕರಣಗಳು ದಾಖಲಾಗಿವೆ ಎಂದು ಗೊತ್ತಾಗಿದೆ, ಬಂಧಿತರೆಲ್ಲರೂ ವೃತ್ತಿಯಲ್ಲಿ ಡ್ರೈವರ್ ಮತ್ತು ಕೂಲಿ ಕೆಲಸ ಮಾಡುತ್ತಿದ್ದರು ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಪ್ರಕರಣದ ಪತ್ತೆ ಕುರಿತು ಅಪರ ಪೊಲೀಸ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ, ಶಹಾಬಾದ ಉಪ-ವಿಭಾಗದ ಡಿ.ಎಸ್.ಪಿ.ಶಂಕರಗೌಡ ಪಾಟೀಲ್ ಅವರ ಮಾರ್ಗದರ್ಶನದಲ್ಲಿ, ಶಹಾಬಾದ ನಗರ ಠಾಣೆ ಪಿ.ಐ, ನಟರಾಜ ಲಾಡ ಅವರ ನೇತೃತ್ವದಲ್ಲಿ, ಪಿ.ಎಸ್.ಐ, ಶಾಮರಾಯ, ಎ.ಎಸ್.ಐಗಳಾದ ಮಲ್ಲಿಕಾರ್ಜುನ, ಗುಂಡಪ್ಪಾ, ಸಿಬ್ಬಂದಿಯವರಾದ ನಾಗೇಂದ್ರ, ಮಲ್ಲಿಕಾರ್ಜುನ, ಬಲರಾಮ, ಸಂತೋಷ, ಹುಸೇನ ಪಾಷ, ಬಿಳಿಯನಸಿದ್ದಯ್ಯಾ, ಆರೀವ್, ರಮೇಶ ಅವರನ್ನೊಳಗೊಂಡ ಎರಡು ತಂಡಗಳಾಗಿ ರಚನೆ ಮಾಡಲಾಗಿತು, ಪ್ರಕರಣ ಪತ್ತೆ ಮಾಡಿದ ತಂಡದ ಕಾರ್ಯಕ್ಕೆ ಮತ್ತು ಪ್ರಕರಣ ಪತ್ತೆ ಹಚ್ಚುವಲ್ಲಿ ಮಹತ್ವದ ಸುಳಿವು ನೀಡಿದ ಶ್ವಾನ ದಳದ ಪಾತ್ರಕ್ಕೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಮೆಚ್ಚುಗೆ ವ್ಯಕ್ತ ಪಡೆಸಿ ಶ್ಲಾಘಿಸಿ, ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.
ದರೋಡೆ ಪ್ರಕರಣದ ಹಿನ್ನೆಲೆ?:
ಆರೋಪಿ ರವಿ ಮೂಲತಃ ಶಹಬಾದ ನಗರದ ನಿವಾಸಿಯಾಗಿದ್ದಾನೆ, ಈತ ವಿಪರೀತ ಸಾಲ ಮಾಡಿಕೊಂಡಿದ್ದ, ಸಾಲದ ಹಣ ಹಿಂದಿರುಗಿಸಲು ಒದ್ದಾಡುತ್ತಿದ್ದ ಎನ್ನಲಾಗಿದೆ. ಈತ ಹಣಮಂತ ತಂದೆ ಪವಾರ ಅವರ ಮನೆಯ ಮೇಲೆ ಹೊಂಚು ಹಾಕಿ ಸಂಚು ರೂಪಿಸಿದ, ಅದರಂತೆಯೇ ತನ್ನ ಪರಚಿತ ನಾಲ್ವರನ್ನು ಅವರ ಬಗ್ಗೆ ಮಾಹಿತಿ ನೀಡಿದ್ದ, ಈ ಸಂಬಂಧ ಜೂನ್ 22 ರಂದು ರಾತ್ರಿ 01-30ರ ಸುಮಾರಿಗೆ ಫೀರ್ಯದಿಯಾಗಿರುವ ಶಹಾಬಾದ ನಗರದ ಧಕ್ಕಾ ತಾಂಡಾದ ಹಣಮಂತ ಅವರು ಶೌಚಾಲಯಕ್ಕೆಂದು ಮನೆಯ ಬಾಗಿಲು ತೆಗೆದು ಹೊರ ಬರುತ್ತಿದ್ದಂತೆ ದುಷ್ಕರ್ಮಿಗಳು ಮನೆಯೊಳಗೆ 05 ಜನ ದರೋಡೆಕೋರರು ನುಗ್ಗಿ ಹಣಮಂತ ಮತ್ತು ಅವರ ಮನೆಯವರಿಗೆ ಸೀರೆಯಿಂದ ಕೈ ಕಾಲು ಕಟ್ಟಿ ಚಾಕು ತಲ್ವಾರ ತೋರಿಸಿ ಮನೆಯಲ್ಲಿದ್ದ ನಗದು ಹಣ, ಬಂಗಾರ ಮತ್ತು ಬೆಳ್ಳಿ ಆಭರಣಗಳು ಹೀಗೆ ಒಟ್ಟು 15 ಲಕ್ಷ 26 ಸಾವಿರ ರೂಪಾಯಿ ಮೌಲ್ಯದ ಆಭರಣ ಮತ್ತು ನಗದು ಹಣ ದರೋಡೆ ಮಾಡಿಕೊಂಡು ಮಹಾರಾಷ್ಟ್ರದ ಅಕ್ಕಲಕೋಟೆಯತ್ತ ಪರಾರಿಯಾಗಿದ್ದರು. ಇದೀಗ ಐವರಲ್ಲಿ ನಾಲ್ವರನ್ನು ಬಂಧಿಸಲಾಗಿದೆ.
ಈ ಕುರಿತಂತೆ ಶಹಾಬಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.