ಕಲಬುರಗಿ: ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಕಳೆದುಕೊಂಡ 46,54,000 ಮೌಲ್ಯದ 225 ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ತಿಳಿಸಿದ್ದಾರೆ.
ನಗರ ಪೊಲೀಸ್ ಆಯುಕ್ತಾಲಯ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಿಷನರ್ ಅವರು, ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಗಳನ್ನು ಕಳೆದುಕೊಂಡಿರುವ ಬಗ್ಗೆ E Lost ಮತ್ತು CEIR PORTAL ನಲ್ಲಿ ದೂರು ದಾಖಲಿಸಿದ್ದಾರೆ. ದೂರು ನೀಡಿರುವ ಮೊಬೈಲ್ ಗಳ ಪತ್ತೆಗಾಗಿ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಎಲ್ಲಾ ಪೊಲೀಸ್ ಠಾಣೆಗಳ ಪೊಲೀಸ್ ಇನ್ಸ್ಪೆಕ್ಟರ್ ಅವರ ಮುಂದಾಳತ್ವದಲ್ಲಿ ತಾಂತ್ರಿಕ ಮತ್ತು ಸೆನ್ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿ ಒಳಗೊಂಡ ತನಿಖಾ ತಂಡ ರಚಿಸಿ, ಕಳೆದುಕೊಂಡ ಮೊಬೈಲ್ ಗಳ ಪತ್ತೆಗಾಗಿ ಜಾಲ ಬೀಸಲಾಗಿತ್ತು. ಪೊಲೀಸರ ಕ್ಷೀಪ್ರ ಕಾರ್ಯಾಚರಣೆ ಮೂಲಕ ಸುಮಾರು 225 ಮೊಬೈಲ್ ಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಗಿದೆ ಎಂದರು.
ಮಾರ್ಚ್ 1 ರಿಂದ ಇಲ್ಲಿಯವರೆಗೆ ಒಟ್ಟು 1423 ಮೊಬೈಲ್ ಫೋನ್ ಗಳನ್ನು ವಾರಸುದಾರರಿಗೆ ಹಿಂದುರುಗಿಸಲಾಗಿದ್ದು, ಸದ್ಯ 225 ಫೋನ್ ಪತ್ತೆ ಹಚ್ಚಲಾಗಿದೆ, ಇಲ್ಲಿಯವರೆಗೆ 3 ಕೋಟಿ ಮೌಲ್ಯದ ಫೋನ್ ಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಮಾಹಿತಿ ನೀಡಿದರು.
ಅಶೋಕ್ ನಗರ ಪೊಲೀಸ್ ಠಾಣೆ-29, ಬ್ರಹ್ಮಪುರ -51, ಸಬ್ ಅರ್ಬನ್- 29 ಮತ್ತು ಗುಲಬರ್ಗಾ ವಿವಿ ಠಾಣೆಯಲ್ಲಿ 21 ಮೊಬೈಲ್ ಗಳನ್ನು ಕಳೆದುಕೊಂಡಿರುವ ಬಗ್ಗೆ ದೂರು ದಾಖಲಾಗಿದ್ದವು. ಉಳಿದ ಮೊಬೈಲ್ ಫೋನ್ ಗಳ ಕಳೆದುಕೊಂಡಿರುವ ಬಗ್ಗೆ E Lost ಮತ್ತು CEIR PORTAL ನಲ್ಲಿ ದೂರು ಬಂದಿದ್ದವು. ದೂರಿನ ಮೇರೆಗೆ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ, ಕಳೆದುಹೋದ ಮೊಬೈಲ್ ಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ನಾಯಕ್ ಇದ್ದರು.
