ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಹೆಸರು ಅಪಪ್ರಚಾರ ನಡೆಸುತ್ತಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಕಲಬುರಗಿಯ ಶ್ರೀ ಧರ್ಮಸ್ಥಳ ಅಭಿಮಾನಿಗಳ ವೇದಿಕೆಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಇಲ್ಲಿನ ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಧರ್ಮಸ್ಥಳ ಅಭಿಮಾನಿಗಳು ರ್ಯಾಲಿ ನಡೆಸುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಈ ವೇಳೆ ಮಾತನಾಡಿದ ಸೇಡಂ ಕ್ಷೇತ್ರದ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರು, ಅನಾಮಿಕ ವ್ಯಕ್ತಿಯ ಕುರಿತಾಗಿ ತನಿಖೆ ನಡೆಸಬೇಕು, ಅವನ ವಿರುದ್ಧ ಮಂಪರು ಪರೀಕ್ಷೆಗೆ ಮುಂದಾಗಬೇಕು, ಈ ಅನಾಮಿಕ ವ್ಯಕ್ತಿಯು ಮುಂದಿನ 16ನೆಯ ಸ್ಥಾನವನ್ನು ವಿಧಾನಸೌಧ ಸ್ಥಳವನ್ನು ತೋರಿಸುತ್ತಾನೆ. ಆಗ ನೀವು ಆ ಕಟ್ಟಡವನ್ನೂ ಅಗೆಯಲು ಶುರು ಮಾಡುತ್ತೀರಾ? ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದಾಗಿನಿಂದಲೂ ರಾಜ್ಯದಲ್ಲಿ ಅಹಿತಕರ ಘಟನೆಗಳು ನಡೆಯುತ್ತಲೇ ಇವೆ, ಧರ್ಮಸ್ಥಳದಲ್ಲಿ ಹೂತಿರುವ ಶವಗಳ ಪ್ರಕರಣ ಕುರಿತಾಗಿ ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದರು.
ಸಿದ್ರಾಮಯ್ಯ ಹಿರೇಮಠ ಮಾತನಾಡಿ, ಮೃತ ಸೌಜನ್ಯಳಿಗೆ ನ್ಯಾಯ ಕೊಡಿಸುವುದಾಗಿ ಹೇಳಿಕೊಂಡು ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಸೌಜನ್ಯಗೆ ನ್ಯಾಯ ಸಿಗಬೇಕೆಂದು ನಾವು ಆಶಿಸುತ್ತೇವೆ. ಈ ಪ್ರಕರಣ ಬಗ್ಗೆ ಮತ್ತಷ್ಟು ತನಿಖೆಯಾಗಲಿ ಎಂದು ಆಗ್ರಹಿಸಿದರು.
ರಾಜಕೀಯ ಮುಖಂಡ ರವಿ ಬಿರಾದಾರ ಕಮಲಾಪುರ ಮಾತನಾಡಿ, ಹಿಂದೂ ಧರ್ಮದ ಅಸ್ಮಿತೆಗೆ ಮಸಿ ಬಳೆಯುವಂತಹ ಕೆಲಸ ಆಗುತ್ತಿದೆ, ಇದರ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಧರ್ಮಸ್ಥಳದ ಕುರಿತಾಗಿ ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ನಿತಿನ್ ಗುತ್ತೇದಾರ್, ಜಯಶ್ರೀ ಮತ್ತಿಮಡು, ನಾಗಲಿಂಗಯ್ಯ ಮಠಪತಿ, ರವಿ ಮದನಕರ್, ಸುರೇಶ್ ತಂಗಾ, ಅನಿಲಕುಮಾರ ಡಾಂಗೆ, ಸಿ.ಎನ್ ಬಾಬಳಗಾoವ, ಸೂರ್ಯಕಾಂತ ಅವರಾದ, ರವಿಕುಮಾರ್ ನೀಲೂರ, ಲಕ್ಷ್ಮೀಕಾಂತ ಸ್ವಾದಿ, ಸದಾನಂದ ಪೆರ್ಲ, ಶೋಭಾ ಬಾಗೇವಾಡಿ, ಶಿವಕುಮಾರ್ ಮದರಿ, ದಿವ್ಯಾ ಹಾಗರಗಿ, ಎಂ.ಎಸ್.ಪಾಟೀಲ್ ನರಿಬೋಳ, ಮಲ್ಲಿಕಾರ್ಜುನ್ ಸಾರವಾಡ ಸೇರಿದಂತೆ ಹಲವರು ಇದ್ದರು.