ಕಲಬುರಗಿ: ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಎನ್ನಲಾಗಿರುವ ದಲಿತ ವಿದ್ಯಾರ್ಥಿನಿ ಜಯಶ್ರೀ ನಾಯಕ ಪ್ರಕರಣವನ್ನು ಕೂಡಲೇ ಉನ್ನತ ತನಿಖೆಗೆ ಒಳಪಡಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಿ.ಜಿ ಸಾಗರ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗ ಶೈಕ್ಷಣಿಕವಾಗಿ ಹಿಂದುಳಿದಿರುವುದನ್ನು ಪರಿಗಣಿಸಿ, ಜಿಲ್ಲೆಗೆ ಕೇಂದ್ರೀಯ ವಿವಿಯನ್ನು ಸ್ಥಾಪಿಸಲಾಗಿದೆ. ಆದರೆ ಈ ವಿವಿ ಇಂದು ಆರೆಸ್ಸೆಸ್ ಅಡ್ಡಿಯಾಗಿ ಮಾರ್ಪಟ್ಟಿರುವುದು ದುರಂತವಾಗಿದೆ, ಒಡಿಶಾ ಮೂಲದ ವಿದ್ಯಾರ್ಥಿನಿಯ ಸಾವು ಆತ್ಮಹತ್ಯೆಯೋ ಅಥವಾ ಕೊಲೆ ಮಾಡಲಾಗಿದೆಯೇ ಎಂಬುವುದನ್ನು ತನಿಖೆಯಿಂದ ಬಹಿರಂಗವಾಗಬೇಕು ಎಂದರು.
ವಿವಿಯಲ್ಲಿ ಇತಿಹಾಸದ ಮೊದಲ ಬಾರಿಗೆ ರಾಮನವಮಿ, ಸರಸ್ವತಿ ಪೂಜೆ, ಹೋಮ ಹವನ, ಯಜ್ಞ, ಗಣೇಶ ಉತ್ಸವಗಳು ಆರಂಭವಾಗಿದ್ದು, ಆರೆಸ್ಸೆಸ್, ಎಬಿವಿಪಿ ಸಂಘಟನೆಯ ಮೂಲದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ, ಕುಲಸಚಿವ, ಪ್ರಾಧ್ಯಾಪಕರು ಸೇರಿದಂತೆ ಇತರೆ ಸಿಬ್ಬಂದಿಯವರು ಕೂಡಿಕೊಂಡು ಕೋಮುದ್ವೇಷದ ವಿಷಬೀಜ ಬಿತ್ತುತ್ತಿದ್ದಾರೆ. ಹೀಗಾದರೆ ದೇಶದ ವಿವಿಧೆಡೆಯಿಂದ ಬಂದಿರುವ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಕಡೆಗೆ ಗಮನ ಕೊಡದೆ ಭಯದ ವಾತಾವರಣದಲ್ಲಿ ಜೀವಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಿವಿಯಲ್ಲಿ ಆಂಧ್ರಪ್ರದೇಶ ಮೂಲದ ಬಿಜೆಪಿ ನಾಯಕರು ಕ್ಯಾಂಟೀನ್ ನಡೆಸುತ್ತಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವುದು ಗೊತ್ತಾಗಿದೆ, ಈ ಕುರಿತು ವಿದ್ಯಾರ್ಥಿಗಳ ಕಲ್ಯಾಣ ಅಧಿಕಾರಿ ಬಸವರಾಜ ಕೂಬಕಡ್ಡಿ, ಕುಲಪತಿಗಳಿಗೆ ಇಮೇಲ್ ಸಂದೇಶ ಕಳಿಸಿದರೂ ಕ್ರಮಕ್ಕೆ ಮುಂದಾಗಿಲ್ಲ. ಇಂತಹ ದೌರ್ಜನ್ಯ ದೊಳಗೆ ವಿದ್ಯಾರ್ಥಿಗಳು ಹೇಗೆ ತಾನೇ ವ್ಯಾಸಂಗಾಡುತ್ತಾರೆ ಎಂದು ಪ್ರಶ್ನಿಸಿದ ಅವರು, ಈ ಕುರಿತು ವಿವಿಯ ಅನೈತಿಕ ಚಟುವಟಿಕೆಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿ.ಸಿ ವಾಲಿ, ಸುರೇಶ್ ಹಾದಿಮನಿ, ಹೆಚ್.ಶಂಕರ್, ಎಸ್. ಪಿ.ಸುಳ್ಳದ, ಉಮೇಶ್ ನರೋಣಾ ಮತ್ತಿತರರು ಇದ್ದರು.