ಕಲಬುರಗಿ: ಸ್ಥಳೀಯ ರೈತರಿಗೆ ನ್ಯಾಯಸಮ್ಮತ ಬೆಲೆ ದೊರಕಿಸಲು ಹಾಗೂ ಅವರ ಆರ್ಥಿಕ ಹಿತಾಸಕ್ತಿಯನ್ನು ಕಾಪಾಡಲು ಹೆಸರು (ಹುರಳಿ) ಖರೀದಿ ಕೇಂದ್ರವನ್ನು ತಕ್ಷಣ ಸ್ಥಾಪಿಸುವಂತೆ ಕೋಟನೂರ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಲ್ಲಿನಾಥ್ ನಾಗನಹಳ್ಳಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕೋಟನೂರ್, ಉದನೂರ್, ನಂದಿಕೂರ್, ನಾಗನಹಳ್ಳಿ, ಪಾಣೆಗಾವ್ , ಸೀತನೂರ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಹೆಸರು ಬೆಲೆಯಲ್ಲಿ ಉಂಟಾದ ತೀವ್ರ ಕುಸಿತದಿಂದ ನಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸರ್ಕಾರಿ ಮಾನ್ಯತೆ ಪಡೆದ ಖರೀದಿ ಕೇಂದ್ರವನ್ನು ತುರ್ತಾಗಿ ಕಾರ್ಯಾರಂಭ ಮಾಡುವ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.
“ಖರೀದಿ ಕೇಂದ್ರ ಆರಂಭವಾದರೆ ಸಾವಿರಾರು ರೈತರಿಗೆ ನೇರ ಲಾಭ ದೊರೆಯುತ್ತದೆ. ಇದು ಮಾರುಕಟ್ಟೆ ದರದಲ್ಲಿ ಸ್ಥಿರತೆ ತರಲಿದೆ ಹಾಗೂ ರೈತರ ಬದುಕಿಗೆ ಭದ್ರತೆ ನೀಡಲಿದೆ” ಎಂದು ಮಲ್ಲಿನಾಥ್ ನಾಗನಹಳ್ಳಿ ಅಭಿಪ್ರಾಯಪಟ್ಟಿದ್ದಾರೆ.
ರೈತರ ಹೋರಾಟಗಳಿಗೆ ಸದಾ ಬೆಂಬಲ ನೀಡುವುದಾಗಿ ಭರವಸೆ ನೀಡಿದ ಅವರು, ಸರ್ಕಾರ ತ್ವರಿತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.