ಕಲಬುರಗಿ: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಈದುಲ್ ಅಝ್ ಹಾ (ಬಕ್ರೀದ್) ಹಬ್ಬವನ್ನು ಜಿಲ್ಲಾದ್ಯಂತ ಎಲ್ಲಾ ಈದ್ಗಾ ಮೈದಾನ ಮತ್ತು ಮಸಜ್ಜಿದ್ ಗಳಲ್ಲಿ ವಿಶೇಷ ಪ್ರಾರ್ಥನೆ ಮೂಲಕ ಮುಸ್ಲಿಂ ಬಾಂಧವರು ಶನಿವಾರ ಸಂಭ್ರಮದ ಈದ್ ಆಚರಿಸಿದರು.
ಆಳಂದ ತಾಲ್ಲೂಕು, ಅಫಜಲಪುರ, ಚಿಂಚೋಳಿ, ಜೇವರ್ಗಿ, ಚಿತ್ತಾಪುರ, ಸೇಡಂ ಪಟ್ಟಣ, ಗ್ರಾಮಗಳಲ್ಲಿ ಸೇರಿದಂತೆ ಕಲಬುರಗಿ ನಗರದ ಆಳಂದ ಬಹ್ಮನಿ ಈದ್ಗಾ ಮೈದಾ, ಸೇಡಂ ಈದ್ಗಾ, ಹಾಗರಗಾ ಈದ್ಗಾ, ಕೆಸಿಟಿ ಕಾಲೇಜು ಮೈದಾನ ಮತ್ತು ಬಹ್ಮನಿ ಜಾಮಿಯಾ ಮಸಜ್ಜಿದ್, ಖಾಜಾ ಬಂದೇನವಾಜ ನವಾಜ್ ದರ್ಗಾ, ಸೂಪರ್ ಮಾರ್ಕೆಟ್ ಮಹೆಬ್ಬಸ್ ಮಸಜ್ಜಿದ್ ಸೇರಿದಂತೆ ನಗರದ ಎಲ್ಲಾ ಜುಮ್ಮಾ ಮಸಜ್ಜಿದ್ ಗಳಲ್ಲಿ ಮುಸ್ಲಿಮರು ಈದುಲ್ ಅಝ್ ಹಾ ಪ್ರಯುಕ್ತ ನಮಾಝ್ ನಿರ್ವಹಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಮಸಜ್ಜಿದ್ ಇಮಾಮಗಳು ಈದಲ್ ಅಝ್ ಹಾದ ಇತಿಹಾಸ ಮತ್ತು ಪ್ರಾಮುಖ್ಯತೆಯ ತಿಳಿಸಿದರು. ಸಮಾಜವನ್ನು ಇಬ್ಭಾಗವನ್ನು ಮಾಡಲು ಯತ್ನಿಸುತ್ತಿರುವ ಸಂಚುಗಳಿಗೆ ಸೌಹಾರ್ದತೆ ವಾತಾವರಣವನ್ನು ಸೃಷ್ಟಿಸುವ ಮಾರ್ಗವಾಗಿ ಎಲ್ಲರೂ ಪಾಲಿಸಬೇಕು ಎಂದು ಕರೆ ನೀಡಿದರು.
ನಮಾಝ್ ನಂತರ ಮುಸ್ಲಿಂ ಬಾಂಧವರು ಪರಸ್ಪರ ಅಪ್ಪಿಕೊಳ್ಳುವ ಮೂಲಕ ಈದ್ ಶುಭಾಶಯ ವಿನಿಮಯ ಮಾಡಿಕೊಂಡರು. ಈ ವೇಳೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆ ಸಿಬ್ಬಂದಿಗಳಿಗೆ ಅಭಿನಂದನೆ ವ್ಯಕ್ತಪಡಿಸಿದರು.
ವಿಶೇಷ ಖಾದ್ಯ ತಯಾರಿಸಿ ಸೇವನೆ:
ತ್ಯಾಗ – ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬದ ಸಂಭ್ರಮದಲ್ಲಿರುವ ಮುಸ್ಲಿಂ ಬಾಂಧವರು ಮನೆಗಳಲ್ಲಿ ಖಾದ್ಯ, ಸಿಹಿ ತಿನಿಸುಗಳು ತಯಾರಿಸುವುದಲ್ಲದೆ, ಸಾಮರ್ಥ್ಯ ಇರುವವರು ಕುರ್ಬಾನಿ(ಪ್ರಾಣಿ ಬಲಿ) ಸಹ ನೆರವೇರಿಸುತ್ತಾರೆ.
ದಾನದ ಸಂಕೇತವೂ ಆಗಿರುವ ಈ ಹಬ್ಬದಂದು ದಾನವಾಗಿ ದೊರೆಯುವ ಮಾಂಸ, ಆಹಾರ, ಹಣ, ದಿನಸಿ ಸಾಮಗ್ರಿ ಸೇರಿದಂತೆ ಹಲವು ಪದಾರ್ಥ, ಪರಿಕರಗಳನ್ನು ದಾನವಾಗಿ ನೀಡುತ್ತಾರೆ.