ಕಲಬುರಗಿ| ಜನರ ನಿರೀಕ್ಷೆಯ ಕಲಬುರಗಿ ರೈಲ್ವೆ ವಲಯ ಘೋಷಣೆಗೆ ಕೊಳ್ಳಿ ಇಟ್ಟ ಸಚಿವ ವಿ.ಸೋಮಣ್ಣ

Date:

Share post:

ಕಲಬುರಗಿ: ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಎಂದು ಗುರುತಿಸಿಕೊಳ್ಳುವ ಕಲಬುರಗಿ ಜನರ ಬೇಡಿಕೆಯಲ್ಲಿ ಪ್ರಮುಖವಾಗಿರುವ ಕಲಬುರಗಿಗೆ ರೈಲ್ವೆ ವಲಯ ಘೋಷಣೆಯಾಗಬೇಕೆಂಬುವ ನಿರೀಕ್ಷೆ ಮತ್ತೆ ನಿರೀಕ್ಷೆಯಾಗಿಯೇ ಉಳಿದುಬಿಟ್ಟಿದೆ.
ಈ ಕುರಿತು ರವಿವಾರ ಕಲಬುರಗಿ ನಗರಕ್ಕೆ ಆಗಮಿಸಿದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಐವಾನ್ ಇ ಶಾಹಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕಲಬುರಗಿ ರೈಲ್ವೆ ವಲಯ ಮಾಡುವುದು ನನಗೂ ಆಸೆ ಇದೆ, ಇತ್ತೀಚೆಗೆ ಜಮ್ಮು ರೈಲ್ವೆ ವಲಯ ಮಾಡಲಾಗಿದೆ. ಅದಕ್ಕೂ ಕಲಬುರಗಿಗೆ ಹೋಲಿಕೆ ಮಾಡಬೇಡಿ. ಜಮ್ಮು ಬೇರೆ ಕಲಬುರಗಿ ಬೇರೆ’ ಎನ್ನುವ ಮೂಲಕ ಈ ಭಾಗದ ಜನರ ದಶಕದ ನಿರೀಕ್ಷೆಯನ್ನು ಸಚಿವರು ಹುಸಿಯಾಗಿಸಿಬಿಟ್ಟರು.

ಕಲಬುರಗಿ ರೈಲ್ವೆ ವಲಯ ಘೋಷಿಸಿ, ಅದಕ್ಕೆ 43 ಎಕರೆ ಜಾಗವನ್ನು ಮೀಸಲಿಟ್ಟಿ 5 ಕೋಟಿ ಅನುದಾನ ಸಹ ಯುಪಿಎ ಸರಕಾರದ ರೈಲ್ವೆ ಸಚಿವ ಮಲ್ಲಿಕಾರ್ಜುನ್ ಖರ್ಗೆ ಅವರು ಕೊಟ್ಟಿದ್ದರು. ಈಗೇಕೆ ಆಗುತ್ತಿಲ್ಲ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕಲಬುರಗಿಯನ್ನು ಖರ್ಗೆ ಅವರು ರೈಲ್ವೆ ವಿಭಾಗವನ್ನು ಮಾಡಲು ಹೊರಟಿದ್ದರು. ಅದಾದ ಬಳಿಕ ಏನೇನೋ ಆಯ್ತು. ಈಗ ಇದನ್ನು ವಲಯವನ್ನಾಗಿ ಘೋಷಿಸುವುದರ ಕುರಿತು ಖರ್ಗೆ ಅವರನ್ನೇ ಹೇಳಿರುವೆ. ಅವರಿಗೆ ಕೇಳಿ, ಅವರು ನಿಮಗೆ ಉತ್ತರಿಸುತ್ತಾರೆ ಎಂದು ಹೇಳುವ ಮೂಲಕ ವಲಯವನ್ನಾಗಿ ಘೋಷಣೆ ಮಾಡುವ ಬಗ್ಗೆ ಸಚಿವರು ಮತ್ತೆ ಸ್ಪಷ್ಟನೆ ನೀಡಲಿಲ್ಲ.

2042ರ ವೇಳೆಗೆ ‘ವಿಕಸಿತ ಭಾರತ’ ಗುರಿಯನ್ನಿಟ್ಟುಕೊಂಡು ರೈಲ್ವೆ ಇಲಾಖೆಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿ, ದೊಡ್ಡ ಕಾಮಗಾರಿಗಳನ್ನು ಮುಗಿಸಲು ಯೋಜಿಸಲಾಗಿದೆ. ದೇಶದಲ್ಲಿ 50 ಕ್ಕೂ ಹೆಚ್ಚು ವಂದೇ ಭಾರತ್ ರೈಲ್ವೆಗಳನ್ನು ಓಡಿಸಲು ಸಿದ್ಧವಾಗಿವೆ, ರಾಜ್ಯದಲ್ಲಿ ಬೆಂಗಳೂರು – ಮಂಗಳೂರು, ಬೆಳಗಾವಿ, ಬೀದರ್ ಕಡೆಗಳಲ್ಲೂ ಓಡಿಸಲು ಒತ್ತಾಯಗಳು ಬಂದಿವೆ. ಇವುಗಳನ್ನು ಹಂತ ಹಂತವಾಗಿ ಈಡೇರಿಸಲಿದ್ದೇವೆ. ಇದರ ಜೊತೆಯಲ್ಲೇ ಮುಂದಿನ ವರ್ಷದಲ್ಲಿ ಬುಲೆಟ್ ಟ್ರೈನ್ ಗೂ ಕೂಡ ಚಾಲನೆ ನೀಡಲಿದ್ದೇವೆ ಎಂದರು.

ಹಂತ ಹಂತವಾಗಿ ಹಳೆಯ ಸಾಮಾನ್ಯ ಬೋಗಿಗಳನ್ನು ತೆರವುಗೊಳಿಸಿ, 10 ಸಾವಿರ ಹೊಸ ಬೋಗಿಗಳನ್ನು ಅಳವಡಿಸಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ. ನಮ್ಮ ರಾಜ್ಯದಲ್ಲೇ 1,700 ಕೋಟಿ ವೆಚ್ಚದಲ್ಲಿ 15 ಸಾವಿರ ಕಿಲೋ ಮೀಟರ್ ಸ್ವದೇಶಿ ನಿರ್ಮಿತ ಕವಚ್ ಎನ್ನುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದೇವೆ. ರೈಲ್ವೆ ಇಲಾಖೆಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಭ್ಯರ್ಥಿಗಳನ್ನು ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ಕೋರಿದ್ದೆ, ಅದರ ಪರಿಣಾಮವಾಗಿ ಇಂದು ಕೇಂದ್ರ ಸರಕಾರ ಆಯಾ ಪ್ರದೇಶದ ಅಭ್ಯರ್ಥಿಗಳಿಗೆ ಪರೀಕ್ಷೆಗಳನ್ನು ಬರೆಯಲು 10 ಭಾಷೆಗಳಿಗೆ ಅವಕಾಶ ಕೊಟ್ಟಿದೆ. ಈಗಾಗಲೇ 65 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

2,300 ಕೋಟಿ ವೆಚ್ಚದಲ್ಲಿ ಬೀದರ್ – ನಾಂದೇಡ್ ಮಧ್ಯೆ 155 ಕಿ.ಮೀ, 3ನೆಯ ಮತ್ತು 4ನೆಯ ಹಂತದ ವಾಡಿ – ಸಿಕಂದರಾಬಾದ್ ಯೋಜನೆಯ 183 ಕಿಮೀ ವ್ಯಾಪ್ತಿಗೆ 4500 ಕೋಟಿ, ವಿಕರಾಬಾದ್ – ವಾಡಿ 268 ಕಿಮೀ ಡಬ್ಲಿಂಗ್ ಗೆ 5600 ಕೋಟಿ, ವಾಡಿ – ಸುಳೆನಹಳ್ಳಿ ಶಹಾಬಾದ್ ಸಂಪರ್ಕಕ್ಕೆ ರೈಲ್ವೆ ಫ್ಲೈ ಓವರ್ ಮಾಡಿ ಡಿಪಿಆರ್ ನಡೆಯುತ್ತಿದೆ. ಈ ಯೋಜನೆಗಳಿಗೆ ನೂರಕ್ಕೆ ನೂರರಷ್ಟು ಭಾರತ ಸರಕಾರ ಹಣ ಕೊಡುತ್ತದೆ ಎಂದರು.

ಹೈದ್ರಾಬಾದ್ – ಚಿತ್ತಾಪುರ ಮಧ್ಯೆ ಓಡಾಡುವ ರೈಲ್ವೆಯು ಕಲಬುರಗಿ ತನಕ ವಿಸ್ತರಿಸುವುದಕ್ಕೆ ಕ್ರಮ ಕೈಗೊಂಡಿದ್ದೇವೆ.
ಹೈದ್ರಾಬಾದ್ – ಕಲಬುರಗಿ ಮಧ್ಯೆ ಒಂದೇ ಭಾರತ್ ರೈಲಿಗೆ ಹೆಚ್ಚಿನ ಬೇಡಿಕೆ ಇದೆ. ಶೀಘ್ರದಲ್ಲಿ ಇದನ್ನು ಮಾಡುವ ಯೋಚನೆ ಇದೆ ಎಂದು ತಿಳಿಸಿದರು.

ದೇಶದಲ್ಲಿ 10 ವರ್ಷದಲ್ಲಿ 44 ಸಾವಿರ ಕಿಮೀ ಡಬ್ಲಿಂಗ್ ಮಾಡಿದ್ದೇವೆ. ಕೆಲವು ಸಾಲಿನಲ್ಲಿ ವಂದೇ ಭಾರತ್ ರೈಲು ಜಾರಿಗೆ ಮತ್ತು ವಿದ್ಯುತೀಕರಣ ಮಾಡಿದ ಹಿನ್ನೆಲೆಯಲ್ಲಿ 17 ರಿಂದ 18 ಸಾವಿರ ಕೋಟಿ ಉಳಿತಾಯವಾಗಿದೆ, ವಾಯು ಮಾಲಿನ್ಯ ಕಡಿಮೆಯಾಗಿದೆ. ಪ್ರಧಾನಿ ಘೋಷಿಸಿರುವ 300 ಅಮೃತ ಭಾರತ ಸ್ಟೇಶನ್ ಗಳಲ್ಲಿ ರಾಜ್ಯದಲ್ಲಿ 61 ಅಮೃತ ಭಾರತ ಸ್ಟೇಶನ್ ಪ್ರಾರಂಭವಾಗಿ ಕೆಲಸ ನಡೆಯುತ್ತಿವೆ ಎಂದು ತಿಳಿಸಿದರು.

ರೈಲ್ವೆ ಡಬ್ಲಿಂಗ್ ಕೆಲಸಕ್ಕಾಗಿ ಯುಪಿಎ ಸರಕಾರ ಇದ್ದಾಗ 2009 – 10 ನೆಯ ಸಾಲಿನಲ್ಲಿ 11,500 ಕೋಟಿ ಖರ್ಚು ಮಾಡಿದ್ದಾರೆ. ನಾವು 2025 – 26ನೆಯ ಸಾಲಿನಲ್ಲಿ 70 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ರೈಲ್ವೆ ಅಭಿವೃದ್ಧಿಗೆ ನಮ್ಮ ಸರಕಾರ ಯುಪಿಎ ಸರ್ಕಾರಕ್ಕಿಂತ ದುಪ್ಪಟ್ಟು ಹಣ ಮೀಸಲಿಟ್ಟು, ಬಾಕಿ ಇರುವ ಕಾಮಗಾರಿಗಳನ್ನು ಮುಗಿಸುತ್ತಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸೋಲಾಪುರ ವಲಯದ ಡಿ.ಆರ್.ಎಂ ಸುಚಿತ್ ಮಿಶ್ರಾ, ಎಂಎಲ್ಸಿ ಶಶೀಲ್ ನಮೋಶಿ, ಶಾಸಕ ಬಸವರಾಜ್ ಮತ್ತಿಮಡು, ಅವಿನಾಶ್ ಜಾಧವ್, ಬಿ.ಜಿ.ಪಾಟೀಲ್, ರಾಜಕುಮಾರ್ ಪಾಟೀಲ್ ತೆಲ್ಕೂರ್, ಅಶೋಕ್ ಬಗಲಿ, ಉಮೇಶ್ ಜಾಧವ್, ದತ್ತಾತ್ರೇಯ ಪಾಟೀಲ್, ಸುಭಾಶ್ ಗುತ್ತೇದಾರ್, ಅಮರನಾಥ್ ಪಾಟೀಲ್ ಸೇರಿದಂತೆ ಮತ್ತಿತರರು ಇದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಸಾರಾಯಿ ಕುಡಿಯಲು ಹಣ ಕೊಡದಿದ್ದಕ್ಕೆ ಪತ್ನಿ ಕೊಲೆ; ಪತಿಗೆ ಜೀವಾವಧಿ ಶಿಕ್ಷೆ, ₹50 ಸಾವಿರ ದಂಡ

ಕಲಬುರಗಿ: ಸಾರಾಯಿ ಕುಡಿಯಲು ಹಣ ಕೋಡದಿದ್ದಕ್ಕೆ ಪತ್ನಿಯ ಮೇಲೆ ಹಲ್ಲೆ ನಡೆಸಿ,...

ಕಲಬುರಗಿ| ಹಲಕಟ್ಟಾ ಶರೀಫ್‍ನಲ್ಲಿ ಉರುಸ್-2025 ಪ್ರಯುಕ್ತ ವಿಶೇಷ ರೈಲು ಸಂಚಾರ 

ಕಲಬುರಗಿ: ಹಲಕಟ್ಟಾ ಶರೀಫನಲ್ಲಿ (ಉರ್ಸ್-ಎ-ಶರೀಫ್) ಉರುಸ್ 2025ರ ಪ್ರಯುಕ್ತ ಕೆಳಕಂಡ ದಿನಾಂಕಗಳಂದು...

ಕಲಬುರಗಿ| ರೈತರ ಒಗ್ಗಟ್ಟಿನಿಂದ ಹಕ್ಕು ಮತ್ತು ನ್ಯಾಯಕ್ಕಾಗಿ ಹೋರಾಟ: ಭೀಮಾಶಂಕರ ಮಾಡಿಯಾಳ

ಕಲಬುರಗಿ: ರೈತರ ಹಿತಾಸಕ್ತಿಗಳನ್ನು ಕಾಪಾಡಲು ಒಗ್ಗಟ್ಟಿನ ಬಲವನ್ನು ತಂದುಕೊಳ್ಳುವುದು ಇಂದಿನ ಅಗತ್ಯವಾಗಿದೆ....

ಕಲಬುರಗಿ| ಜುಲೈ ಮಾಸಾಂತ್ಯಕ್ಕೆ ಜಿಲ್ಲಾ ಕಸಾಪದಿಂದ ಯುವ ಸಾಹಿತ್ಯ ಸಮ್ಮೇಳನ: ವಿಜಯಕುಮಾರ ಪಾಟೀಲ ತೇಗಲತಿಪ್ಪಿ

ಕಲಬುರಗಿ : ಯುವ ಬರಹಗಾರರಿಗೆ ಸ್ಫೂರ್ತಿ ನೀಡಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾ...