ಕಲಬುರಗಿ: ಸೊಳ್ಳೆಗಳಿಂದ ಹರಡುವಂತಹ ರೋಗಗಳಾದ ಡೆಂಗ್ಯೂ, ಚಿಕೂನ ಗುನ್ಯಾ, ಆನೆಕಾಲು ರೋಗ, ಮಲೇರಿಯಾ ಹಾಗೂ ಮಿದುಳು ಜ್ವರದಂತಹ ರೋಗಗಳ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮದ ಭಾಗವಾಗಿ ಜನರಲ್ಲಿ ಜಾಗೃತಿಯನ್ನು ಮಾಡುವುದು ಅತ್ಯವಶ್ಯಕವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಶರಣಬಸಪ್ಪ ಕ್ಯಾತನಾಳ ಅವರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಕರೆ ನೀಡಿದರು.
ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸೊಳ್ಳೆಗಳ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಅವರು, ಆರೋಗ್ಯ ವಲಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ಹಲವಾರು ರೋಗಗಳ ಕುರಿತು ಜನ ಜಾಗೃತಿಯನ್ನು ಮೂಡಿಸಲು ದಿನಾಚಣೆಗಳನ್ನು ಆಚರಿಸಿ ಬರುವಂತಹ ಪರಿಪಾಠಗಳನ್ನು ಬೆಳೆಸಿಕೊಂಡು ಬಂದಿದೆ. ಇಲಾಖೆಯ ಸಿಬ್ಬಂದಿಯವರು ಸಾರ್ವಜನಿಕರ ಸಹಯೋಗದೊಂದಿಗೆ ಜನ ಸಮುದಾಯದಲ್ಲಿ ಮಲೇರಿಯಾದಂತಹ ಮಾರಕ ರೋಗವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಶ್ರಮ ಹಾಕಿದ್ದಾರೆ ಎಂದು ಶ್ಲಾಘಿಸಿದರು.
ಮಳೆಗಾಲದ ಸಂದರ್ಭದಲ್ಲಿ ಅತೀ ಹೆಚ್ಚು ಪ್ರಸರಣ ಹೊಂದುತ್ತಿರುವ ಡೆಂಗ್ಯೂ ರೋಗವನ್ನು ಕೂಡಾ ನಿಯಂತ್ರಣ ತರುವುದು ಸಾರ್ವಜನಿಕರ ಸಹಯೋಗವೂ ಕೂಡಾ ಹೆಚ್ಚಿದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬಾಗವಹಿಸಿದ್ದ ಜಿಲ್ಲಾ ಸಂತಾನೋತ್ಪತ್ತಿ ಹಾಗೂ ಮಕ್ಕಳ ಆರೋಗ್ಯ ಅಧಿಕಾರಿ ಡಾ.ಸಿದ್ದು ಪಾಟೀಲ ಮಾತನಾಡಿ, ಬ್ರಿಟೀಷ್ ಬಾರತದಲ್ಲಿ ವೈದ್ಯಾಧಿಕಾರಿಯಾಗಿದ್ದ ಸರ್. ರೋನಾಲ್ಡ್ ರಾಸ್ ರವರು ಸೊಳ್ಳೆಗಳಿಂದ ಅದೂ ವಿಶೇಷವಾಗಿ ಅನಾಫೀಲೀಸ್ ಹೆಣ್ಣು ಸೊಳ್ಳೆಯಿಂದ ಮಲೇರಿಯಾ ರೋಗವೂ ಹರಡುತ್ತದೆ ಎಂದು ಇಡೀ ಜಗತ್ತಿಗೆ ತೋರಿಸಿಕೊಟ್ಟರು. ಈ ದೇಶದ ಸಿಕಂದ್ರಾಬಾದ್ ಹಾಗೂ ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರು ಹಲವಾರು ಸೊಳ್ಳೆಗಳನ್ನು ಅಧ್ಯಯನ ಮಾಡಿ ಅಗಸ್ಟ್ 20, 1897 ರಂದು ಕಂಡು ಹಿಡಿದ ಅವರ ಕಾರ್ಯ ಶ್ಲಾಘನೀಯವೆಂದು ಅಭಿಪ್ರಾಯ ಪಟ್ಟರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ಕಾರ್ಯಕ್ರಮ ಅಧಿಕಾರಿ ಡಾ.ಶಿವಶರಣಪ್ಪ ಭೂಸನೂರ ಮಾತನಾಡಿ, ಸೊಳ್ಳೆಗಳು ಮಳೆಗಾಲದಲ್ಲಿ ಅಷ್ಟೇ ಅಲ್ಲ ವರ್ಷದುದ್ದಕ್ಕೂ ತಮ್ಮ ಸಂತಾನೋತ್ಪತ್ತಿ ಮಾಡುತ್ತಿದ್ದು, ಹೀಗಾಗಿ ಇತ್ತೀಚಿನ ದಿನಗಳಲ್ಲಿ ವರ್ಷದುದ್ದಕ್ಕೂ ಡೆಂಗ್ಯೂ ಹಾಗೂ ಚಿಕೂನ್ ಗುನ್ಯಾ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಇಲಾಖೆಯ ಸಿಬ್ಬಂದಿಗಳು ಸಾರ್ವಜನಿಕರ ಸಹಕಾರವನ್ನು ತೆಗೆದುಕೊಂಡು ಜನಜಾಗೃತಿಯನ್ನು ಮೂಡಿಸುವುದು ಜೊತೆಗೆ ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ನಿರ್ಮೂಲನೆ ಮಾಡಬೇಕಾಗಿದೆ ಎಂದು ಇಲಾಖೆಯ ಸಿಬ್ಬಂದಿಗಳಿ ತಿಳಿ ಹೇಳಿದರು.
ಜಿಲ್ಲಾ ಕಾಲರಾ ನಿಯಂತ್ರಣ ಅಧಿಕಾರಿ ಡಾ.ವಿವೇಕಾನಂದ ರೆಡ್ಡಿ ಮಾತನಾಡಿ, ಶಾಲಾ ಮಟ್ಟದಲ್ಲಿ ಈಗಾಗಲೇ ಇಲಾಖೆಯ ಸಿಬ್ಬಂದಿಗಳು ಹೋಗಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ, ಮುಂದಿನ ದಿನಗಳ ಸುಮುದಾಯದತ್ತ ತೆರಳಿ ಸ್ವಸಹಾಯ ಗುಂಪಿನ ಸಹಾಯ ಹಾಗೂ ಸಂಘ ಸಂಸ್ಥೆಗಳ ಸಹಕಾರವನ್ನು ತೆದುಕೊಂಡು ಸಾಮಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಸಮುದಾಯದ ಪಾತ್ರ ಕುರಿತು ವಿವರಣೆ ನೀಡಿದರೆ ಸಾಂಕ್ರಾಮಿಕ ರೋಗ ರಹಿತ ಸಮಾಜವನ್ನಾಗಿ ನಿರ್ಮಾಣ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಅಧಿಕಾರಿ ಡಾ.ಶಿವಶರಣಪ್ಪ ಮೂಳೆಗಾಂವ್ ಮಾತನಾಡಿದರು.
ಕಾರ್ಯಕ್ರಮವನ್ನು ಜಿಲ್ಲಾ ಕೀಟಶಾಸ್ತಜ್ಞ ಚಾಮರಾಜ ದೊಡಮನಿ ನಿರೂಪಿಸಿದರು, ಸಮಾಲೋಚಕ ಕಾರ್ಣಿಕ ಕೋರೆ ವಂದಿಸಿದರು, ಕಾರ್ಯಕ್ರಮದಲ್ಲಿ ಇಲಾಖೆಯ ಎಲ್ಲ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.