ಕಲಬುರಗಿ: ಕಳೆದ 12 ವರ್ಷಗಳಿಂದ ಇಲ್ಲಿನ ರಂಗ ಸಂಗಮ ಕಲಾವೇದಿಕೆಯು ಕೊಡಮಾಡುತ್ತಾ ಬಂದಿರುವ ಎಸ್.ಬಿ.ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ವೃತ್ತಿ ರಂಗಭೂಮಿಯ ದಯಾನಂದ ಬೀಳಗಿ ಮತ್ತು ಸುಭದ್ರಾದೇವಿ ಜಂಗಮಶೆಟ್ಟಿ ರಂಗಪ್ರಶಸ್ತಿಗೆ ಹವ್ಯಾಸಿ ರಂಗಭೂಮಿಯ ನಟಿ ಗೀತಾ ಮೋಂಟಡ್ಕ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಎಲ್.ಬಿ.ಶೇಖ್ ಮಾಸ್ತರ್ ಹಾಗೂ ರಂಗಾಯಣ ನಿರ್ದೇಶಕಿ ಡಾ.ಸುಜಾತ ಜಂಗಮಶೆಟ್ಟಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ದಯಾನಂದ ಬೀಳಗಿ ಅವರು ಮೂಲತಃ ಗದಗಿನವರು. ಬೆಳೆದದ್ದು ಎನ್.ಬಸವರಾಜ ಅವರ ಶ್ರೀ ಸಂಗಮೇಶ್ವರ ನಾಟ್ಯ ಸಂಘ ಕಂಪನಿಯಲ್ಲಿ. ಇವರ ಆರಂಭದ ದಿನಗಳಲ್ಲಿ ಸುಮಾರು ವರ್ಷಗಳ ಕಾಲ ಅಟೋ ಚಾಲಕರಾಗಿ, ಪೇಂಟರ್ ಆಗಿ ಹಾಗೂ ಬಟ್ಟೆ ವ್ಯಾಪಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ದಯಾನಂದ, 2004ರಲ್ಲಿ ಕುಮಾರೇಶ್ವರ ನಾಟ್ಯ ಸಂಘ. ಹಾನಗಲ್ಲ ಕಂಪನಿಯ ಮಾಲಿಕರಾದ ಎಲ್.ಬಿ.ಶೇಖ ಮಾಸ್ತರ ಅವರ ಕಂಪನಿಯಿಂದಲೇ ಇವರು ತಮ್ಮ ರಂಗಪಯಣವನ್ನು ಪ್ರಾರಂಭಿಸಿದ್ದರು. ಹಾನಗಲ್ಲ ಕಂಪನಿಯಲ್ಲಿ ಕಾರ್ಯದರ್ಶಿಯಾಗಿ, ನಿರ್ದೇಶಕರಾಗಿ ಕೆಲನಮಾಡಿದ ಇವರು ಎಲ್ಲಾ ತರಹದ ಪಾತ್ರದಲ್ಲಿ ಜನಮನ್ನಣೆ ಪಡೆದಿದ್ದಾರೆ. ಶ್ರೀಧರ ಹೆಗಡೆಯವರ ಇವರಿಗೆ ರಂಗಗುರುಗಳು, ಬಹುಮುಖ ಪ್ರತಿಭೆಯುಳ್ಳ ಇವರು ನಾಯಕನ ಪಾತ್ರ, ಪೋಷಕ ಪಾತ್ರ, ಖಳನಾಯಕನ ಪಾತ್ರ, ಹಾಸ್ಯ ಪಾತ್ರಗಳಲ್ಲಿಯೂ ಜನಮೆಚ್ಚುಗೆ ಪಡೆದಿದ್ದಾರೆ.
ಕಲಬುರಗಿಯ ಒಂದೇ ಕ್ಯಾಂಪಿನಲ್ಲಿ 2004 ರಿಂದ 2009 ರವರೆಗೂ ಸುಮಾರು ೪೪ ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಕುಮಾರೇಶ್ವರ ನಾಟ್ಯಸಂಘ ಹಾನಗಲ್ಲ ವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘ ಜೇವರ್ಗಿ ಶ್ರೀಗುರು ಖಾನ್ಗತೇಶ್ವರ ನಾಟ್ಯ ಸಂಘ ತಾಳಿಕೋಟೆ ಶ್ರೀ ಕುಮಾರ ವಿಜಯ ನಾಟಕ ಸಂಘ ಚಿತ್ತರಿಗಿ ಜೇವರ್ಗಿ ರಾಜಣ್ಣರವರ ಕಂಪನಿ. ಹುಚ್ಚೇಶ್ವರ ನಾಟ್ಯ ಸಂಘ ಹೀಗೆ ಹಲವಾರು ಕಂಪನಿಗಳಲ್ಲಿ ಪಾತ್ರವಹಿಸಿ, ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಇವರು ಅಭಿನಯಿಸಿದ ಕುಂಟಕೋಣ ಮೂಕ ಜಾಣ ನಾಟಕವು ರಾಜ್ಯಾದ್ಯಂತ ಸುಮಾರು 4000 ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಿಯಾಲಿಟಿ ಷೋ ನಲ್ಲಿ ಜನಮೆಚ್ಚುಗೆ ಪಡೆದಿದ್ದಾರೆ.
ಮೂವತ್ತೈದು ವರ್ಷಗಳಿಂದ ಮೈಸೂರಿನ ರಂಗಾಯಣದಲ್ಲಿ ವೃತ್ತಿ ಬದುಕು ನಡೆಸುತ್ತಿರುವ ಹಿರಿಯ ಕಲಾವಿದೆ. ಬಹುಮುಖ ಪ್ರತಿಭೆಯ ಇವರು ರಂಗಕರ್ಮಿಯಾಗಿ, ರಂಗನಿರ್ದೇಶಕಿಯಾಗಿ ನಟಿ, ಗಾಯಕಿ, ನಾಟಕ ರಚನಾಗಾರ್ತಿಯಾಗಿ, ಕನ್ನಡ ಹಾಗೂ ಅರೆಭಾಷೆ ಕನ್ನಡದ ಲೇಖಕಿಯಾಗಿ ಮುಖ್ಯವಾಗಿ ಅಣುಕು (ಮಿಮಿಕ್ರಿ) ಕಲಾವಿದೆಯಾಗಿ ಗುರುತಿಸಿಕೊಂಡ ಅತ್ಯದ್ಭುತ ಕಲಾವಿದೆ ಗೀತಾ ಮೋಂಟಡ, ಮೈಸೂರಿನ ರಂಗಾಯಣಕ್ಕೆ 1989ರಲ್ಲಿ ಬಂದು ಸುದೀರ್ಘವಾದ ೩೫ ವರುಷಗಳ ರಂಗಾನುಭವ ಇವರದ್ದಾಗಿದೆ. ರಂಗಾಯಣದ ವತಿಯಿಂದ ಅಮೇರಿಕ, ಜರ್ಮನಿ, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ರಂಗಪ್ರದರ್ಶನ ನೀಡಿದ್ದಾರೆ. ಇವರು ಹಲವಾರು ನಾಟಕಗಳನ್ನು ಹಾಗೂ ರಂಗರೂಪಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ.
ಇವರು ಕರ್ನಾಟಕದ ಮೊಟ್ಟಮೊದಲ ಮಿಮಿಕ್ರಿ ಕಲಾವಿದೆಯಾಗಿದ್ದಾರೆ. 6000 ಕ್ಕೂ ಹೆಚ್ಚ ಏಕವ್ಯಕ್ತಿ ಪರ್ದಶನ ನೀಡಿದ್ದಾರೆ. ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ ಹಾಗೂ ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ. ರಂಗಭೀಷ್ಮ ಡಾ. ಬಿ. ವಿ. ಕಾರಂತರ ಗರಡಿಯಲ್ಲಿ ವಿಶೇಷ ತರಬೇತಿಯನ್ನು ಪಡೆದಾರಲ್ಲದೆ, ಇಂಗ್ಲೆಡಿನ ಜಾನ್ ಮಾರ್ಟಿನ್, ಗ್ರೀಕ್ ನ ವಶೀಲಿಯೋಸ್ ಕ್ಯಾಲಟ್‌ಸ್, ಇಟಲಿಯ ಇಲಿಯಾನಾ. ಹಾಗೂ ಜರ್ಮನಿಯ ಕ್ರಿಶ್ಚಿಯನ್ ಸ್ಟುಕ್ಸ್, ಊವೆ ಎನ್ಸನ್. ಫ್ರಿಟ್ಸ್ ಬೆನವಿಟ್ಸ್ ರಂತಹ ಪ್ರಬುದ್ಧ ನಾಟಕಕಾರರ ಒಡನಾಟದಲ್ಲಿ ರಂಗ ತಂತ್ರಜ್ಞತೆಯ ಹಲವು ಆಯಾಮಗಳಲ್ಲಿ ಕಲಿಕೆ ಹಾಗೂ ರಂಗತಾಂತ್ರಿಕತೆಯಲ್ಲಿ ಪರಿಣಿತಿಯನ್ನು ಪಡೆದಿದ್ದಾರೆ.
ಹಾಗಾಗಿ ಅವರ ರಂಗ ಭೂಮಿಗೆ ನೀಡಿರುವ ಸೇವೆಯನ್ನು ಪರಿಗಣಿಸಿ ಇಬ್ಬರನ್ನು ಜುಲೈ 20 ರಂದು ಕಲಬುರಗಿ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಆಯೋಜಿಸಲಾಗುವ ಸಮಾರಂಭದಲ್ಲಿ ತಲಾ 10 ಸಾವಿರ ರೂ. ಪ್ರಶಸ್ತಿ ಪತ್ರ ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.
ಇವೆರಡೂ ಪ್ರಶಸ್ತಿಗಳ ಆಯ್ಕೆಗಾಗಿ ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಎಲ್.ಬಿ.ಶೇಖ್ ಮಾಸ್ತರ್ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಸದಸ್ಯರಾದ ಹಿರಿಯ ರಂಗಕರ್ಮಿ ಎಚ್.ಎಸ್.ಬಸವಪ್ರಭು, ರಂಗಕರ್ಮಿ ಶಾಂತಾಕುಲಕರ್ಣಿ, ಸಾಹಿತಿ ಬಿ.ಎಚ್.ನಿರಗುಡಿ ರಂಗಕರ್ಮಿ ನಾರಾಯಣ ಕುಲಕರ್ಣಿ, ರಂಗ ನಿರ್ದೇಶಕ ವಿಶ್ವರಾಜ ಪಾಟೀಲ್ ರಂಗಾಯಣ ನಿರ್ದೇಶಕಿ ಡಾ.ಸುಜಾತ ಜಂಗಮಶೆಟ್ಟಿ ಹಾಗೂ ರಂಗ ಸಂಗಮ ಕಲಾವೇದಿಕೆಯ ಅಧ್ಯಕ್ಷೆ ಶಿವಗೀತಾ ಬಸವಪ್ರಭು ಇದ್ದರು.