ಕಲಬುರಗಿ: ನಗರದ ಸರಾಫ್ ಬಝಾರ್ ಪ್ರದೇಶದಲ್ಲಿನ ಚಿನ್ನದಂಗಡಿಯೊಂದರಲ್ಲಿ ಅಂದಾಜು 3 ಕೋಟಿ ಮೌಲ್ಯದ ಬಂಗಾರದ ಆಭರಣಗಳನ್ನು ದರೋಡೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿ, ಅವರ ಬಳಿ 35 ಸಾವಿರ ರೂಪಾಯಿ ನಗದು ಹಣ, 01 ಲೈಟರ್ ಗನ್ ಹಾಗೂ 01 ಕಬ್ಬಿಣದ ಮಚ್ಚನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರದ ಮುಂಬೈ ನಗರದ ಮಾನ್ಪುರ ಪ್ರದೇಶದ ಅರ್ಬಾಜ್ ಬಶೀರ್ ಶೇಖ್(22) ಹಾಗೂ ಅದೇ ಪ್ರದೇಶದಲ್ಲಿ ಇಂಟರ್ನೆಟ್ ಕೆಲಸ ಮಾಡುತ್ತಿದ್ದ ಮಹಮದ್ ಸಾಜಿದ್ ಮಂಡಲ್ (25) ಬಂಧಿತ ಆರೋಪಿಗಳಾಗಿದ್ದಾರೆ.
ಕಳೆದ ವಾರವಷ್ಟೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಂತರ್ ರಾಜ್ಯ ಆರೋಪಿಗಳನ್ನು ಬಂಧಿಸಿ, ಅವರ ಬಳಿ 2.865 ಕೆ.ಜಿ ಬಂಗಾರ ಹಾಗೂ 4.80 ಲಕ್ಷ ನಗದು ಹಣ ಜಪ್ತಿ ಮಾಡಿಕೊಳ್ಳಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಐವರು ಆರೋಪಿಗಳನ್ನು ಬಂಧಿಸಿ, ಅವರ ಬಳಿ ಬಂಗಾರದ ಆಭರಣಗಳು, ನಕಲಿ ಪಿಸ್ತೂಲ್, ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಶ್ಚಿಮ ಬಂಗಾಳದ ಗೋಪಾಲ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ನಿವಾಸಿ ಅಯೋಧ್ಯಾ ಪ್ರಸಾದ್ ಚವ್ಹಾಣ್ (48), ಇನ್ನೋರ್ವ ಅದೇ ರಾಜ್ಯದ ದಡಪೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಾಸವಿದ್ದು, ಬಂಗಾರ ವ್ಯಾಪಾರಿಯಾಗಿದ್ದ ಫಾರುಕ್ ಅಹಮದ್ ಮಲ್ಲಿಕ್(40) ಹಾಗೂ ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಟೇಲರ್ ಆಗಿ ಕೆಲಸ ಮಾಡುತ್ತಿದ್ದ ಸೊಹೆಲ್ ಶೇಖ್ ಅಲಿಯಾಸ್ ಬಾದಶಾ(30) ಈ ಮೊದಲು ಬಂಧಿತ ಆರೋಪಿಗಳಾಗಿದ್ದಾರೆ.
ಜುಲೈ 11 ರಂದು ನಗರದಲ್ಲಿ ಮಲ್ಲಿಕ್ ಜ್ಯುವೆಲ್ಸ್ ಮಳಿಗೆಯಲ್ಲಿ ಅಂದಾಜು 3 ಕೋಟಿ ಮೌಲ್ಯದ ಬಂಗಾರದ ಆಭರಣಗಳನ್ನು ದರೋಡೆ ಮಾಡಿರುವ ಪ್ರಕರಣ ರಾಜ್ಯದೆಲ್ಲೆಡೆ ಭಾರೀ ಸಂಚಲನ ಮೂಡಿಸಿತ್ತು. ಈ ಕುರಿತು ಇಲ್ಲಿನ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣವನ್ನು ಬೇಧಿಸಲು ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನು ಒಳಗೊಂಡ ಐದು ತನಿಖಾ ತಂಡಗಳನ್ನು ರಚಿಸಿ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ, ದರೋಡೆಕೋರರನ್ನು ಬಂಧಿಸಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತಾಲಯ ಪ್ರಕಟಣೆಯಲ್ಲಿ ತಿಳಿಸಿದೆ.