ಕಲಬುರಗಿ: ಚಿಂಚೋಳಿ ಪಟ್ಟಣದ ಬಸವೇಶ್ವರ ವೃತ್ತದಿಂದ ಚಂದಾಪುರದ ಅಗ್ನಿಶಾಮಕ ಠಾಣೆವರೆಗಿನ ರಾಜ್ಯ ಹೆದ್ದಾರಿ ವಿಸ್ತರಣೆ ಮಾಡಿ ಮಧ್ಯದಲ್ಲಿ ವಿಭಜಕ ಹಾಗೂ ವಿದ್ಯುದ್ದೀಪ ಅಳವಡಿಸಿ ಸೌಂದರ್ಯೀಕರಣ ಕೈಗೊಳ್ಳಬೇಕೆಂದು ಜಿಲ್ಲಾ ಬಿಜೆಪಿಯ ‘ಮನ್ ಕಿ ಬಾತ್’ ಸಂಚಾಲಕ ಸಂತೋಷ ಗಡಂತಿ ಒತ್ತಾಯಿಸಿದ್ದಾರೆ.
ಇದೊಂದು ಕರ್ನಾಟಕ ತೆಲಂಗಾಣ ಅಂತರ ರಾಜ್ಯ ರಸ್ತೆಯ ಭಾಗವಾಗಿದೆ. ಬಸವೇಶ್ವರ ವೃತ್ತದಿಂದ ಚಂದಾಪುರ ಕಡೆಗೆ ಮಿನಿ ವಿಧಾನ ಸೌಧ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ, ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ, ಸರ್ಕಾರಿ ಪದವಿ ಕಾಲೇಜು, ಅರಣ್ಯ ಇಲಾಖೆಯ ಕಚೇರಿಗಳು, ಸರ್ಕಾರಿ ಪ್ರೌಢ ಮತ್ತು ಪಿಯು ಕಾಲೇಜು, ತೋಟಗಾರಿಕೆ, ಶಿಕ್ಷಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಇದೇ ಮಾರ್ಗದಲ್ಲಿರುವುದರಿಂದ ಸಾವಿರಾರು ಜನರ ಸಂಚಾರವಿದೆ. ಆಗಾಗ ಅಪಘಾತಗಳು ಸಂಭವಿಸುತ್ತಿರುವುದರಿಂದ ರಸ್ತೆ ವಿಸ್ತರಣೆ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಕ್ರಮಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ಈ ರಸ್ತೆಯ ವಿಸ್ತರಣೆಗಾಗಿಜಿಲ್ಲಾ ಖನಿಜನಿಧಿಯಿಂದ ಅಂದಾಜು ₹ 2 ಕೋಟಿ ಅನುದಾನ ಮಂಜೂರಾಗಿತ್ತು. ಅದರಂತೆ ಕಾಮಗಾರಿಯ ಟೆಂಡರ್ ಕರೆದಾಗ ಮೂರು ಮಂದಿ ಅರ್ಹ ಗುತ್ತಿಗೆದಾರರಿಗೆ ಕಾಮಗಾರಿ ನಡೆಸಲು ಅಂತಿಮಗೊಳಿಸಲಾಗಿತ್ತು. ಗುತ್ತಿಗೆದಾರರು ಕಾಮಗಾರಿ ಆರಂಭಿಸಿ ಜಂಗಲ್ ಕಟಿಂಗ ಮಾಡಿದ್ದರು ಆದರೆ ಈವರೆಗೂ ಕಾಮಗಾರಿ ನಡೆಸಿಲ್ಲ. ಡಿಎಂಎಫ್ ಅನುದಾನ ರಾಜ್ಯ ಸರ್ಕಾರ ಹಿಂಪಡೆದ ಅನುಮಾನವಿದೆ. ಅನುದಾನ ಲಭ್ಯವಿದ್ದರೆ ಕಾಮಗಾರಿ ಏಕೆ ನಡೆಸುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.