ಕಲಬುರಗಿ: ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಹೇಳಿಕೆಗಳನ್ನು ನೀಡುತ್ತಿರುವ ಬಿಜೆಪಿ ಮುಖಂಡರಾದ ಮಣಿಕಂಠ ರಾಠೋಡ್, ಚಂದು ಪಾಟೀಲ್, ಆಂದೋಲಾ ಸ್ವಾಮೀಜಿ ಅವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ, ಆಮ್ ಆದ್ಮಿ ಪಾರ್ಟಿಯ ಅಲ್ಪಸಂಖ್ಯಾತ ಘಟಕದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಬಳಿಕ ಮಾತನಾಡಿದ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಸುಲೇಮಾನ್ ಅಲಿ, ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷಕಾರಿ ಹೇಳಿಕೆ ನೀಡುತ್ತಿದ್ದರೂ ಜಿಲ್ಲೆಯಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ, 15 ನಿಮಿಷ ಪೊಲೀಸರನ್ನು ತಡೆದರೆ ಮುಸ್ಲಿಂ ಸಮುದಾಯವನ್ನು ನಾಶ ಮಾಡುವುದಾಗಿ ಹೇಳಿದ ಮಣಿಕಂಠ ರಾಠೋಡ್, ಮುಸ್ಲಿಂ ಬಡಾವಣೆಗಳಿಗೆ ನುಗ್ಗಲು ಪ್ರಯತ್ನಿಸಿದ ಚಂದು ಪಾಟೀಲ್ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿಲ್ಲ. ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಾವೇ ಖುದ್ದಾಗಿ ಪ್ರಕರಣ ದಾಖಲಿಸಿದ್ದೇವೆ. ಸರಕಾರ ಯಾವುದೇ ಕ್ರಮ ಜರುಗಿಸಿಲ್ಲ. ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕಿ ಖನೀಜ್ ಫಾತೀಮಾ ಅವರು ಯಾಕೆ ಮೌನ ವಹಿಸಿದ್ದಾರೆ ಎನ್ನುವುದನ್ನು ಗೊತ್ತಾಗಬೇಕಿದೆ ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತ ಶಿರಾಜ್ ಶಾಬ್ದಿ ಮಾತನಾಡಿ, ಮಣಿಕಂಠ ರಾಠೋಡ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದರೂ ಬಂಧಿಸಿಲ್ಲ ಏಕೆ? ಅವರ ವಿರುದ್ಧ ರೌಡಿಶೀಟರ್ ತೆಗೆದು ಜೈಲಿಗೆ ಅಟ್ಟಬೇಕು, ಇಲ್ಲದಿದ್ದರೆ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಆರೋಪಿಗಳು ಪೊಲೀಸರ ಸುಪರ್ದಿಗೆ ಸಿಗದಿದ್ದರೆ ನಮಗೆ ಅವಕಾಶ ಕೊಡಿ, ಆರೋಪಿಗಳು ಎಲ್ಲೇ ಇದ್ದರೂ ಅವರನ್ನು ಕರೆ ತರುವ ಕೆಲಸ ನಾವು ಮಾಡುತ್ತೇವೆ ಎಂದು ಕಿಡಿಕಾರಿದರು.
ಅಪರ ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿ ಪತ್ರದಲ್ಲಿ ಬಿಜೆಪಿ ಮುಖಂಡರಾದ ಮಣಿಕಂಠ ರಾಠೋಡ್, ಚಂದು ಪಾಟೀಲ್, ಶಾಸಕ ಶರಣು ಸಲಗರ್, ಆಂದೋಲಾ ಸ್ವಾಮೀಜಿ, ಉಮೇಶ್ ಪುರಿ ಸೇರಿದಂತೆ ಮತ್ತಿತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು, ಮತ್ತಿತರ ಸoಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು.