ಕಲಬುರಗಿ: ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿ ಕೈದಿಯೋರ್ವನ ಮೇಲೆ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ವಿಚಾರಣಾ ಕೈದಿ ತುಳಸಿರಾಮ್ ತಂದೆ ಪಂಡಿತ್ ಹರಿಜನ ಎಂಬಾತನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕೈದಿ ತುಳಸಿರಾಮ್ ತಂದೆ ಪಂಡಿತ್ ಹರಿಜನ ಎಂಬಾತನು ಇನ್ನೋರ್ವ ವಿಚಾರಣಾ ಕೈದಿಯಾಗಿರುವ ಕಿರಣ್ ರಮೇಶ್ ಶೆಟ್ಟಿ ಎಂಬಾತನ ಮೇಲೆ ಪರ್ಸಿ ಕಲ್ಲಿನಿಂದ ಹಲ್ಲೆ ನಡೆಸಿ, ಗಾಯಗೊಳಿಸಿದ್ದಾನೆ. ಅಲ್ಲದೆ, ಕಾರಾಗೃಹಗಳ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಕಾರಣಕ್ಕಾಗಿ ತುಳಸಿರಾಮ್ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತುಳಸಿರಾಮ್ ಮತ್ತು ಕಿರಣ್ ಇಬ್ಬರೂ ಪರಸ್ಪರ ಮಾತನಾಡುತ್ತಿರುವಾಗಲೇ ಮಾತಿಗೆ ಮಾತು ಬೆಳೆದು ಏಕಾಏಕಿ ಇಬ್ಬರ ಮಧ್ಯೆ ಜಗಳವಾಗಿದೆ. ಈ ಸಂದರ್ಭದಲ್ಲಿ ತುಳಸಿರಾಮ್, ಕಿರಣ್ ಶೆಟ್ಟಿ ಮೇಲೆ ಎರಗಿ ಪರ್ಸಿ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಗಾಯಗೊಂಡ ಕಿರಣ್ ಶೆಟ್ಟಿಯನ್ನು ಕಾರಾಗೃಹದಲ್ಲೇ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದುಬಂದಿದೆ.