ಕಲಬುರಗಿ: ಕೇಂದ್ರ ಕಾರಾಗೃಹದ ಒಳಾವರಣದಲ್ಲಿ ನಶಾಮುಕ್ತ ಭಾರತ ಅಭಿಯಾನದ ಅಡಿಯಲ್ಲಿ ಮಾದಕ ವಸ್ತುಗಳನ್ನು ಸೇವನೆ ಮಾಡದೇ ಇರುವುದರ ಕುರಿತಂತೆ ಸರ್ಕಾರ ಹಾಗೂ ಪ್ರಧಾನ ಕಛೇರಿಯ ಆದೇಶದಂತೆ ಈ ಸಂಸ್ಥೆಯ ಮುಖ್ಯಸ್ಥರಾದ ಡಾ. ಅನಿತಾ ಆರ್. ರವರು ಕಾರಾಗೃಹದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳೊಂದಿಗೆ ಮತ್ತು ಬಂದಿಗಳೊಂದಿಗೆ ಸೇರಿ ಮಾದಕ ವಸ್ತುಗಳನ್ನು ಸೇವನೆ ಮಾಡದೇ ಇರುವುದರ ಕುರಿತು ಸಾಮೂಹಿಕ ಪ್ರತಿಜ್ಞೆಯ ಪ್ರಮಾಣ ವಚನ ಸ್ವೀಕರಿಸಿದ್ದರು.
ನಂತರ ಮಾತನಾಡಿದ ಅವರು, ನಶಾಮುಕ್ತ ಭಾರತ ಅಭಿಯಾನದ ಅಡಿಯಲ್ಲಿ ಒಂದಾಗುತ್ತಿದ್ದೇವೆ ಮತ್ತು ಸಮುದಾಯ, ಕುಟುಂಬ, ಸ್ನೇಹಿತರು, ಸ್ವತಃ ನಾವೆಲ್ಲರೂ ಮಾದಕ ವ್ಯಸನದಿಂದ ದೂರವಾಗಿ ಉಳಿದವರನ್ನು ಅದರಿಂದ ಅಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು ನಮ್ಮೇಲ್ಲರ ಕರ್ತವ್ಯವಾಗಿದೆ. ಆದುದರಿಂದ, ನಾವೇಲ್ಲೂರು ಒಟ್ಟಾಗಿ ಸೇರಿ ನಮ್ಮ ಜಿಲ್ಲೆಯಾದ ಕಲಬುರಗಿ ಜಿಲ್ಲೆಯನ್ನು ಮಾದಕ ವ್ಯಸನ ಮುಕ್ತವಾಗಿಸಲು ದೃಡಸಂಕಲ್ಪ ಮಾಡಿ ಅದರಂತೆ ಪ್ರಮಾಣಿಕವಾಗಿ ಪ್ರಯತ್ನ ಮಾಡೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಛೇರಿಯ ಅಧೀಕ್ಷಕ ಎಂ.ಹೆಚ್. ಆಶೇಖಾನ್, ಸಂಸ್ಥೆಯ ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ ಡಾಂಗೆ, ಜೈಲರ್‍ಗಳಾದ ಸುನಂದ.ವಿ., ಶ್ರೀಮಂತಗೌಡ ಪಾಟೀಲ್, ಶಾಮ ಬಿದ್ರಿ ಹಾಗೂ ಸಂಸ್ಥೆಯ ಶಿಕ್ಷಕ ನಾಗರಾಜ ಮುಲಗೆ ಹಾಗೂ ಸಂಸ್ಥೆಯ ಎಲ್ಲಾ ಅಧಿಕಾರಿ/ ಸಿಬ್ಬಂದಿಗಳು ಭಾಗವಹಿಸಿದರು.