ಕಲಬುರಗಿ: ಕರಕುಶಲ ವಸ್ತುಗಳನ್ನು ಉತ್ಪಾದಿಸುವುದರ ಜೊತೆಗೆ ಆ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿ ಮಾಡುವುದೂ ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಅಭಿಪ್ರಾಯಪಟ್ಟರು.
ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ಬುಧವಾರ ಭಾರತ ಸರ್ಕಾರದ ಜವಳಿ ಮಂತ್ರಾಲಯದ ಕರಕುಶಲ ಆಯುಕ್ತರ ಕಚೇರಿಯ ಧಾರವಾಡ ವಿಭಾಗದ ಕರಕುಶಲ ಸೇವಾ ಕೇಂದ್ರವು ಬಿದಿರು ಬುಟ್ಟಿ ಹೆಣೆಯುವ ಕರಕುಶಲ ಕರ್ಮಿಗಳಿಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕಲಬುರಗಿ ರೊಟ್ಟಿಯನ್ನು ರಾಷ್ಟ್ರ ಮಟ್ಟದ ಬ್ರಾಂಡ್ ಮಾಡುವುದಕ್ಕೂ ಮುನ್ನ ಸೇಡಂನಲ್ಲಿ ವಿಧವೆಯೊಬ್ಬರು ತಮ್ಮ ಬದುಕು ಕಟ್ಟಿಕೊಳ್ಳಲು ರೊಟ್ಟಿ ತಯಾರಿಸಿ ಮಾರಾಟ ಮಾಡುವುದನ್ನು ಗಮನಿಸಿದ್ದೆ. ರೊಟ್ಟಿ ತಯಾರಿಕೆಯನ್ನೇ ಬ್ರಾಂಡ್ ಮಾಡಿದರೆ ಹೇಗೆ ಎಂಬ ಕಲ್ಪನೆ ಮೂಡಿತು. ಆ ನಂತರ ವಿವಿಧ ಇಲಾಖೆಗಳ ಸಹಯೋಗದಲ್ಲಿ ಇದನ್ನು ಕಾರ್ಯರೂಪಕ್ಕೆ ತರಲು ಮುಂದಾದೆವು. ಕೇವಲ 15 ತಿಂಗಳಲ್ಲಿ 50 ಲಕ್ಷ ರೂ. ಮೌಲ್ಯದ ವಹಿವಾಟು ನಡೆದಿದೆ. 100ಕ್ಕೂ ಅಧಿಕ ರೊಟ್ಟಿ ತಯಾರಿಸುವ ಯಂತ್ರಗಳನ್ನು ವಿತರಿಸಲಾಗಿದೆ. ಇತ್ತೀಚೆಗೆ ಪ್ರಧಾನಿಯವರು ತಮ್ಮ “ಮನ್ ಕಿ ಬಾತ್” ನಲ್ಲಿಯೂ ಕಲಬುರಗಿ ರೊಟ್ಟಿ ಬಗ್ಗೆ ಪ್ರಸ್ತಾಪಿಸಿದರು. ಇದೀಗ ವಿದೇಶಗಳಿಗೆ ರೊಟ್ಟಿ ರಫ್ತು ಮಾಡಲು ಅಗತ್ಯವಿರುವ ಪರವಾನಗಿ ಪಡೆಯಲಾಗಿದೆ ಎಂದರು.
ಜಿಲ್ಲೆಯಲ್ಲಿ ತಯಾರಾಗುವ 250ಕ್ಕೂ ಅಧಿಕ ಹೆಣಿಗೆ ಉತ್ಪನ್ನಗಳನ್ನು ನೀತಿ ಆಯೋಗದ ಸಭೆಯಲ್ಲಿ ವಿತರಿಸಲಾಯಿತು. ಇಂತಹ ಹಲವು ಕಲೆಗಳು ಜಿಲ್ಲೆಯ ಜನರಲ್ಲಿದ್ದು, ಅವುಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಆಗಬೇಕಿದೆ. ಕರಕುಶಲ ಆಯುಕ್ತರ ಕಾರ್ಯಾಲಯದವರು ಜಿಲ್ಲೆಯ ಕರಕುಶಲ ಕರ್ಮಿಗಳಿಗೆ ಪೂರಕವಾದ ಯೋಜನೆಗಳೊಂದಿಗೆ ಬಂದರೆ ವಿವಿಧ ಇಲಾಖೆಗಳ ಸಂಯೋಜನೆಯೊಂದಿಗೆ ಕಾರ್ಯಕ್ರಮ ರೂಪಿಸಬಹುದು ಎಂದು ಭರವಸೆ ನೀಡಿದರು.
ಭಾರತ ಸರ್ಕಾರದ ಜವಳಿ ಮಂತ್ರಾಲಯದ ಕರಕುಶಲ ಆಯುಕ್ತರ ಕಚೇರಿಯ ಸಹಾಯಕ ನಿರ್ದೇಶಕ ಕಿರಣ್ ವಿ.ಎನ್. ಅವರು ಮಾತನಾಡಿ, ಧಾರವಾಡದಲ್ಲಿ ಕಚೇರಿ ಹೊಂದಿರುವ ಕರಕುಶಲ ಸೇವಾ ಕೇಂದ್ರದ ವ್ಯಾಪ್ತಿಯಲ್ಲಿ ಎಂಟು ಜಿಲ್ಲೆಗಳು ಬರುತ್ತವೆ. ಪ್ರತಿ ಜಿಲ್ಲೆಯಲ್ಲಿ ನುರಿತ ತಜ್ಞರಿಂದ ಕರಕುಶಲ ಕಲೆಯ ಬಗ್ಗೆ ತರಬೇತಿ ಕೊಡಿಸಲಾಗುತ್ತಿದೆ. ಪ್ರವಾಸೋದ್ಯಮಕ್ಕೆ ಪೂರಕವಾಗಿ ಆನೆಗೊಂದಿಯಲ್ಲಿ ಕರಕುಶಲ ಗ್ರಾಮವನ್ನು ಆರಂಭಿಸಲಾಗಿದ್ದು, ಕಲಬುರಗಿಯ ಗ್ರಾಮವೊಂದರಲ್ಲಿ ಅಂತಹ ಪ್ರಯತ್ನಗಳನ್ನು ಜಿಲ್ಲಾಡಳಿತ ಮಾಡಿದರೆ ಇಲಾಖೆಯಿಂದ 5 ಕೋಟಿ ರೂ. ವರೆಗೆ ಆರ್ಥಿಕ ನೆರವು ಸಿಗಲಿದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿ, ಜಿಲ್ಲೆಯಲ್ಲಿ ಕರಕುಶಲ ವೃತ್ತಿಯಲ್ಲಿ ತೊಡಗಿಸಿಕೊಂಡವರು ಹಲವರಿದ್ದು, ಅವರ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆ ಸೃಷ್ಟಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದರು.
ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಮಹಿಳಾ ಕುಶಲರ್ಮಿಗಳು ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ಹಿರಿಯ ಚಿತ್ರಕಲಾವಿದ ವಿಜಯ್ ಹಾಗರಗುಂಡಗಿ, ಹಿರಿಯ ಶಿಲ್ಪಕಲಾವಿದ ಚಂದ್ರಶೇಖರ ಶಿಲ್ಪಿ, ವಿಶ್ವಭಾರತಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಾರದಾ ಯಾಕಾಪುರ, ಗಾಯತ್ರಿ ಶಿಲ್ಪಿ, ಶ್ರೀವಿದ್ಯಾ ಇತರರು ಭಾಗವಹಿಸಿದ್ದರು. ತುಮಕೂರಿನ ಕಲಾವಿದ ನವೀನ್ ತರಬೇತಿ ನೀಡಿದರು. ಧಾರವಾಡ ಸಿಡಾಕ್ ಸಂಸ್ಥೆಯ ಜಗದೀಶ್ ಯಲಿಗಾರ ಕಾರ್ಯಕ್ರಮ ನಿರೂಪಿಸಿದರು.