ಕಲಬುರಗಿ: ಕಾಳಗಿ ತಾಲೂಕಿನಲ್ಲಿ ಮೊದಲ ಬಾರಿಗೆ ಪಟ್ಟಣ ಪಂಚಾಯತ್ ಚುನಾವಣೆ ಆ.17 ರಂದು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪಕ್ಷವು ನನ್ನ ಕನಸಿನ ಕಾಳಗಿ ಎಂಬ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಾರ್ಡ್ ನಂ. 10ರ ನಾಮು ನಾಯಕ್ ಮತ್ತು ಕಿಂಡಿ ತಾಂಡದ ಪಕ್ಷೇತರ ಅಭ್ಯರ್ಥಿ ರೋಹಿತ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಅವರ ಸಂಪೂರ್ಣ ಬೆಂಬಲವನ್ನು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಘೋಷಿಸಿದ್ದಾರೆ.
ಕಾಳಗಿಯಲ್ಲಿ ಉತ್ತಮವಾದ ಮೂಲಭೂತ ಮತ್ತು ನಾಗರಿಕ ಸೌಕರ್ಯ, ಆರೋಗ್ಯ ಹಾಗೂ ನೈರ್ಮಲ್ಯ, ಶಿಕ್ಷಣ ಹಾಗೂ ಯುವ ಸಬಲೀಕರಣ, ಉದ್ಯೋಗ ಹಾಗೂ ಕೌಶಲ್ಯ ಅಭಿವೃದ್ಧಿ, ಕೃಷಿ ಹಾಗೂ ಸಂಬಂಧಿಸಿದ ಚಟುವಟಿಕೆಗಳು, ಹಸಿರು ಕ್ರಾಂತಿ, ಮಹಿಳಾ ಮತ್ತು ಮಕ್ಕಳ ಸಬಲೀಕರಣ, ಸಾಮಾಜಿಕ ನ್ಯಾಯ ಹಾಗೂ ಆಡಳಿತ, ನಾಗರಿಕ ಕೇಂದ್ರಿತ ಸೇವೆ, ಪಾರಂಪರ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಪ್ರಕಟಿಸಲಾಗಿದೆ.
ಈಗಾಗಲೇ ರೈತರಿಗೆ ಜಮೀನುಗಳಿಗೆ ಹೋಗಲು ಹಾದಿ ನಿರ್ಮಾಣ, ನೀರಾವರಿ, ಸಾರಿಗೆ ಸೌಲಭ್ಯ ಸೇರಿದಂತೆ ಅನೇಕ ಯೋಜನೆಗಳು ಜಾರಿಗೆ ತಂದಿದ್ದೇವೆ. ನನ್ನ ಅವಧಿಯಲ್ಲಿ ಕಾಳಗಿಯನ್ನು ಮಾದರಿಯನ್ನಾಗಿ ಮಾಡುತ್ತೇನೆ ಎಂದು ಎಂಎಲ್ಸಿ ಜಗದೇವ ಗುತ್ತೇದಾರ ಹೇಳಿದರು.
ಈ ಸಂದರ್ಭದಲ್ಲಿ ಸುಭಾಷ್ ರಾಥೋಡ್, ವಿಶ್ವನಾಥ್ ವನಮಾಲಿ,ರಾಘವೇಂದ್ರ ಗುತ್ತೇದಾರ್, ಶಿವಶರಣಪ್ಪ ಕಮಲಾಪುರ್, ಸಂತೋಷ್ ಪತಂಗೆ, ವೇದ ಪ್ರಕಾಶ್ ಮೋಟಗಿ, ಮಲ್ಲಿಕಾರ್ಜುನ್ ಗಾಜರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.