ಕಲಬುರಗಿ: ಇಲ್ಲಿನ ಸಬ್ ಅರ್ಬನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮನೆ ಕೀಲಿ ಒಡೆದು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರ ಬಳಿಯಿದ್ದ ಒಂದು ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್ ಹಾಗೂ 16.50 ಲಕ್ಷ ಮೌಲ್ಯ ದ 165 ಗ್ರಾಂ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್. ಡಿ ತಿಳಿಸಿದ್ದಾರೆ.
ಇಲ್ಲಿನ ನಗರ ಪೊಲೀಸ್ ಆಯುಕ್ತಾಲಯ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ತಾಪುರ ತಾಲೂಕಿನ ಕೋರವಾರದ ಇಮ್ರಾನ್ ಇಮಾಮಸಾಬ ವಗ್ದಾಲ ಹಾಗೂ ಎಸ್.ಎಂ ಕೃಷ್ಣ ಕಾಲೋನಿಯ ನಿವಾಸಿ ಶೇಖ್ ಅಲ್ತಾಫ್ ಅಲಿಯಾಸ್ ಅಲ್ತಾಸ್ ಅಮೀನಸಾಬ್ ಉಪ್ಪಾರ ಬಂಧಿತ ಆರೋಪಿಗಳಾಗಿದ್ದಾರೆ ಎಂದರು.
ಎಸ್.ಎಂ ಕೃಷ್ಣ ನಗರದ ನಿವಾಸಿ ಸಿದ್ದಮ್ಮ ವಿಠ್ಠಲ ಬಿಲವಾಡ ಅವರು ನೀಡಿದ ದೂರಿನ ಮೆರೆಗೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖಾ ತಂಡ ರಚಿಸಲಾಗಿತ್ತು. ಡಬರಾಬಾದ್ ಕ್ರಾಸ್ ಸಮೀಪ ನಂಬರ್ ಪ್ಲೇಟ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದರು. ಪೊಲೀಸರನ್ನು ನೋಡಿ ಮರೆಮಾಚುವಂತೆ ಯತ್ನಿಸಿದಾಗ ಸಂಶಯ ವ್ಯಕ್ತವಾಗಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ವೇಳೆ ಎಸ್.ಕೃಷ್ಣ ಕಾಲೋನಿಯಲ್ಲಿ ಕಳ್ಳತನ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಆರೋಪಿತರಿಂದ 45 ಗ್ರಾಂ ಬಂಗಾರದ ಬುದ್ದನ ಮೂರ್ತಿವುಳ್ಳ ಸರ, 30 ಗ್ರಾಂ ಸಿಂಗಲ್ ತಾಳಿ ಸರ, 10 ಗ್ರಾಂ ಬಂಗಾರದ ಬೋರಮಳ, 20 ಗ್ರಾಂ 4 ಜೊತೆ ಕಿವಿಯೋಲೆ, 20 ಗ್ರಾಂ ನಕ್ಲೇಸ್, 30 ಗ್ರಾಂ ಬಂಗಾರದ ಬಳೆಗಳು, 10 ಗ್ರಾಂ ಬಂಗಾರದ ಬ್ರಾಸಲೆಟ್. ಹೀಗೆ ಒಟ್ಟು 16 ಲಕ್ಷದ 50 ಸಾವಿರ ಮೌಲ್ಯದ 165 ಗ್ರಾಂ ಬಂಗಾರದ ಆಭರಣಗಳು ಹಾಗೂ ಬೈಕ್ ವೊಂದನ್ನು ವಶಕ್ಕೆ ಪಡೆಯುವಲ್ಲಿ ನಮ್ಮ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ವಿವರಿಸಿದರು.
ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಿ, ಪ್ರಶಂಶನಾ ಪತ್ರ ವಿತರಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಕನಿಕಾ ಸಿಕ್ರಿವಾಲ್ ಮತ್ತಿತರ ಅಧಿಕಾರಿಗಳು ಇದ್ದರು.