ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ಚಿತ್ರಕಲಾವಿದರಿದ್ದಾರೆ. ಆದರೆ ಅವರನ್ನು ಕಡೆಗಣಿಸಿ ಅವಕಾಶ ವಂಚಿತರನ್ನಾಗಿ ಮಾಡಲಾಗಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಡೀನ್ ಟಿ.ವಿ. ಶಿವಾನಂದನ್ ಕಳವಳ ವ್ಯಕ್ತಪಡಿಸಿದರು.
ಚಿತ್ರ ಕಲಾವಿದ ಡಾ. ರೆಹಮಾನ್ ಪಟೇಲ್ ಅವರು ಪ್ರಸಕ್ತ ಸಾಲಿನ ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ಪ್ರಶಸ್ತಿ ಪಡೆದ ಹಿನ್ನೆಲೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಗೆಳೆಯರ ಬಳಗದ ವತಿಯಿಂದ ನಗರದ ಕನ್ನಡ ಭವನದ ಕಲಾ ಸೌಧದಲ್ಲಿ ಶನಿವಾರ ಏರ್ಪಡಿಸಿದ ಅವರ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲೆ ಜೀವನದ ಬಹುದೊಡ್ಡ ಪ್ರತಿಭೆ. ಇಂಥ ಪ್ರತಿಭಾವಂತ ಕಲಾವಿದರಿದ್ದು ಅಂಥವರನ್ನು ಗುರುತಿಸಿ ಪ್ರೋತ್ಸಾಹಿಸಬೇಕಾಗಿದೆ ಎಂದು ಹೇಳಿದ ಅವರು, ಇಲ್ಲಿಯ ನೆಲ-ಜಲ, ಪ್ರಕೃತಿಯ ಸೊಬಗನ್ನು ಕಲಾ ಕುಂಚದ ಮೂಲಕ ಅನಾವರಣಗೊಳಿಸುವ ಶಕ್ತಿ ಕಲಾವಿದರಲ್ಲಿದೆ. ಕಲೆಯಿಂದ ಸಮಾಜದ ಅಂಕು-ಡೊAಕುಗಳನ್ನು ತಿದ್ದಿ ಸುಧಾರಣೆ ಮಾಡಬಹುದಾಗಿದೆ. ಈ ದಿಸೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಲಾವಿದರಿಗೆ ಸದಾವಕಾಶ ಮಾಡಿಕೊಟ್ಟಿರುವುದು ರಾಜ್ಯದಲ್ಲಿ ಪ್ರಥಮವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಪ್ರಮೀಳಾ ಎಂ.ಕೆ. ಮಾತನಾಡಿ, ಕಲೆ, ಸಾಹಿತ್ಯ ಮತ್ತು ಸಂಗೀತಗಳು ನಮ್ಮ ಬದುಕಿನ ನೆಮ್ಮದಿಗೆ ನೆಲೆಗಳಾಗಿವೆ. ಚಿತ್ರಕಲಾವಿದರಲ್ಲಿ ಡಾ. ರೆಹಮಾನ್ ಪಟೇಲ್ ಅವರು ಈ ಭಾಗದ ಶ್ರೇಷ್ಠ ಕಲಾವಿದರು. ಜೀವನ ಮೌಲ್ಯಗಳನ್ನು ಒಂದು ಚಿತ್ರಕಲೆಯ ಮೂಲಕ ಅಭಿವ್ಯಕ್ತ ಪಡಿಸುವ ಪ್ರತಿಭೆ ನಮ್ಮ ಕಲಾವಿದರಲ್ಲಿದೆ. ಡಾ. ರೆಹಮಾನ್ ಪಟೇಲರ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ತುಂಬಾ ಔಚಿತ್ಯಪೂರ್ಣವಾಗಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಪ್ರತಿಯೊಬ್ಬರಲ್ಲೂ ಕಲಾವಿದ ಅಡಗಿರುತ್ತಾನೆ. ಅದಕ್ಕೆ ಪ್ರೋತ್ಸಾಹ ನೀಡಿದಾಗ ಮಾತ್ರ ಮತ್ತಷ್ಟು ಕಲಾವಿದರನ್ನು ಇಂದಿನ ಸಮಾಜಕ್ಕೆ ಕೊಡುಗೆಯಾಗಿ ನೀಡಬಹುದು. ಪರಿಷತ್ತು ಜಿಲ್ಲೆಯಲ್ಲಿನ ಎಲ್ಲಾ ಕ್ಷೇತ್ರಗಳ ಪ್ರತಿಭೆಗಳನ್ನು ಗುರುತಿಸಿ ಬೆಳಕು ಕಾಣುವ ಹಾಗೇ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ನಿತ್ಯ ನೂತನ ಕಾರ್ಯಕ್ರಮಗಳ ಆಯೋಜನೆಯ ಮೂಲಕ ಸಾಂಸ್ಕೃತಿಕ ಪರಿಸರ ನಿರ್ಮಿಸಲಾಗುತ್ತಿದೆ ಎಂದರು.
ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಚಿತ್ರಕಲಾವಿದ ಡಾ. ರೆಹಮಾನ್ ಪಟೇಲ್, ಹಿರಿಯ ಚಿತ್ರಕಲಾವಿದ ರಾಜಶೇಖರ ಶಾಮಣ್ಣ, ಮಹ್ಮದ್ ಅಯಾಜೋದ್ದಿನ್ ಪಟೇಲ್ ಮಾತನಾಡಿದರು. ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಹಿರಿಯ ಕವಿ ಪರಮೇಶ್ವರ ಶಟಕಾರ, ಪ್ರಮುಖರಾದ ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಎಂ.ಎನ್. ಸುಗಂದಿ, ಅಮೃತಪ್ಪ ಅಣೂರ ಕವಿ, üರಾಘವೇಂದ್ರ ಬುರ್ಲಿ, ಶೇಖರ ಬ್ಯಾಕೋಡ್, ಬಾಬುರಾವ ಪಾಟೀಲ, ಗಣೇಶ ಚಿನ್ನಾಕಾರ, ಡಾ. ಶಾಹೇದ್ ಪಾಷಾ ಇತರರು ಉಪಸ್ಥಿತರಿದ್ದರು.