ಕಲಬುರಗಿ: ನಗರದ ಪೂಜಾರಿ ಚೌಕ್ ನಲ್ಲಿ ಕಲ್ಯಾಣ ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಚೇರಿಯನ್ನು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಉದ್ಘಾಟನೆ ನೆರವೇರಿಸಿದರು.
ಬಳಿಕ ಕಲ್ಯಾಣ ಕರ್ನಾಟಕ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳನ್ನ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಭಾಗದಲ್ಲಿ ಶಿಕ್ಷಣ ಕ್ರಾಂತಿಯಾಗಬೇಕು, ಮಕ್ಕಳು ಉತ್ತಮ ಅಂಕ ಗಳಿಸುವುದರ ಜೊತೆಗೆ ಮಾನವೀಯ ಮೌಲ್ಯಗಳು ಬೆಳೆಸಿಕೊಳ್ಳಬೇಕು. ಸಂಘಟನೆಗಳು ಸಮಾಜದ ಬೆನ್ನೆಲುಬಾಗಿ ನಿಂತು ಸಮಾನತೆ, ಬ್ರಾತೃತ್ವ, ಶಿಕ್ಷಣದ ಅಭಿವೃದ್ಧಿಗಾಗಿ ದುಡಿಯಬೇಕು ಎಂದು ಹೇಳಿದರು.
ಸಂಘದ ಗೌರವ ಅಧ್ಯಕ್ಷ ಅನಿಲಕುಮಾರ್ ಬಿರಾದಾರ್ ಪ್ರಾಸ್ತವಿಕ ಮಾತಾಡಿ ಸಂಘದ ಗುರಿ ಉದ್ದೇಶ ತಿಳಿಸಿದರು.
ಸಂಘದ ಸಂಸ್ಥಾಪಕ ಅಧ್ಯಕ್ಷ ರವಿ ಡೊಳೆ ಪದಾಧಿಕಾರಿಗಳಿಗೆ ಆದೇಶ ಪ್ರತಿ ವಿತರಿಸಿ ಸಂಘಟನೆ ಬಲಪಡಿಸಿ ನಮ್ಮ ಭಾಗದಲ್ಲಿ ನೌಕರರ ಹಿತ ರಕ್ಷಣೆ ಮಾಡುವಂತೆ ತಿಳಿಸಿದರು.
ಜಿಲ್ಲಾ ಅಧ್ಯಕ್ಷ ಮಹೇಶಕುಮಾರ್ ಹೆಬ್ಬಾಳೆ ಮಾತನಾಡಿ, ಸಮಾಜಕ್ಕೆ ಸಹಕಾರಿಯಾಗಲು ಸಂಘಟನೆಗೆ ಬನ್ನಿ, ಶಾಲು, ಹಾರ, ಪದವಿಗಳಿಗಾಗಿ ಬರಬೇಡಿ ಎಂದು ತಿಳಿಸಿದರು.
ಆಳಂದ, ಚಿತ್ತಾಪುರ, ಕಮಲಾಪುರ, ಕಲಬುರಗಿ ಉತ್ತರ ಮತ್ತು ದಕ್ಷಿಣ ತಾಲೂಕಿನ ಅಧ್ಯಕ್ಷರುಗಳಿಗೆ ಸನ್ಮಾನಿಸಿ ತಾಲೂಕ ಸಂಘ ಬಲಪಡಿಸಲು ಕೋರಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘದ ಶ್ರೀನಿವಾಸ್ ಗುತ್ತೇದಾರ್, ಅಂಬಿಕಾ ತಡಕಲ್, ಹೈದರ್ ಅಲಿ, ಅಣವೀರಪ್ಪ ಯಾಕಾಪುರ್, ಗಂಗಾಧರ್ ಮ್ಯಾಕೇರಿ, ಪ್ರಭು ಹಾಗೂ ತಾಲೂಕಿನ ಪದಾಧಿಕಾರಿಗಳು ಹಾಜರಿದ್ದರು.