ಕಲಬುರಗಿ: ‘ರಾಷ್ಟ್ರಮಟ್ಟದಲ್ಲಿ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಕಾಯ್ದೆ ಜಾರಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಾಳತ್ವ ವಹಿಸಿ, ರೈತರ ಪರವಾಗಿ ಧ್ವನಿ ಎತ್ತಲಿ’ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಆಳಂದ ಶಾಸಕ ಬಿ.ಆರ್.ಪಾಟೀಲ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ತಮ್ಮ ಸ್ವಂತ ಹೊಲದಲ್ಲಿ ಉಳಿಮೆ ಮಾಡಿದವರು. ರೈತರ ಸಂಕಷ್ಟ, ನೋವು ಅವರಿಗೆ ಗೊತ್ತಿದೆ. ಹಾಗಾಗಿ ಗಂಭೀರವಾಗಿ ಯೋಚಿಸಿ, ಭೂಸ್ವಾಧೀನ ಮಾಡುವ ಕುರಿತಾಗಿರುವ ನಿರ್ಧಾರವನ್ನು ರದ್ದುಪಡಿಸಿದ್ದಾರೆ. ಇದನ್ನ ಮಾಡಿರುವಂತೆಯೇ ಕನಿಷ್ಠ ಬೆಂಬಲ ಬೆಲೆಯ ಜಾರಿಗೆಗೆ ರಾಷ್ಟ್ರಮಟ್ಟದಲ್ಲೂ ಮುಂದಾಳತ್ವ ವಹಿಸಿ, ಹೋರಾಟ ನಡೆಸಿದರೆ ಯಶಸ್ವಿಯಾಗುತ್ತದೆ ಎಂದರು.
‘ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದ 1,777 ಎಕರೆ ಜಮೀನು ಸ್ವಾಧೀನಪಡಿಸಿಕೊಂಡು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಬಿಜೆಪಿ ಸರಕಾರ ಇದ್ದಾಗಿನಿಂದಲೂ ಭೂಸ್ವಾಧೀನ ಮಾಡಿಕೊಳ್ಳುವುದು ಪ್ರಾರಂಭಿಸಲಾಗಿತ್ತು. ಆದರೂ, ರೈತರ ಹಿತ ರಕ್ಷಣೆಗಾಗಿ ಭೂಮಿ ಮರಳಿ ರೈತರಿಗೆ ಕೊಡುವಂತಹ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತಾರ್ಹ. ಈ ಮೂಲಕ ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ನಮ್ಮ ಸರ್ಕಾರ ಕೊನೆಗೂ ತೆರೆ ಎಳೆದಿದೆ. ರೈತರ ಪರವಾಗಿ ನಿಂತಿರುವ ಸಿಎಂ ಸಿದ್ದರಾಮಯ್ಯ ನವರಿಗೆ ಅಭಿನಂದಿಸುತ್ತೇನೆ ಎಂದು ಹೇಳಿದರು.
ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ, ಫರಹತಾಬಾದ್, ತಾವಗೇರಾ ಪ್ರದೇಶದಲ್ಲಿ 1,500 ಭೂಮಿಯನ್ನು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಸ್ವಾಧೀನಪಡಿಸಿಕೊಂಡಿತ್ತು. 15 ವರ್ಷಗಳಾದರೂ ಒಂದೂ ಉದ್ದಿಮೆ ಬಂದಿಲ್ಲ. ಜೇವರ್ಗಿಯ ಫುಡ್‌ಪಾರ್ಕ್ ಯೋಜನೆಯೂ ಯಶಸ್ವಿಯಾಗಿಲ್ಲ. ಮತ್ತೊಂದೆಡೆ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಗೂ ಸಿದ್ಧತೆ ನಡೆದಿದೆ. ಅದೂ ಯಶಸ್ವಿಯಾಗಲ್ಲ ಎಂದು ತಿಳಿಸಿದರು.
‘ಹಿಂದೆ ಸ್ವಾಧೀನ ಪಡಿಸಿಕೊಂಡ 1500 ಎಕರೆ ಜಮೀನಿನಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆ ಕುರಿತು ಚಿಂತನೆ ನಡೆಸಲಾಗುತ್ತಿದೆ. ಸೋಲಾರ್ ಪಾರ್ಕ್‌ಗೆ ಫಲವತ್ತಾದ ಕೃಷಿ ಜಮೀನು ಯಾಕೆ ಬೇಕು? ಹೊನ್ನಕಿರಣಗಿ ಹೆಸರು ಬಂದಿದ್ದೇ ಅಲ್ಲಿ ಸಮೃದ್ಧವಾಗಿ ಬೆಳೆದ ಜೋಳದಿಂದ. ಹೀಗಾಗಿ ಅಂಥ ನೆಲದಲ್ಲಿ ಸೋಲಾರ್ ಪಾರ್ಕ್ ಬೇಡ. ಭೂಮಿ ಬೇಕಿದ್ದರೆ ನಾನೇ ಆಳಂದ ತಾಲ್ಲೂಕಿನಲ್ಲಿ ಕೊಡುತ್ತೇನೆ’ ಎಂದು ಭರವಸೆ ನೀಡಿದರು.
ಈ 1,500 ಎಕರೆ ಭೂಮಿಯಲ್ಲಿ ಸೋಲಾರ್ ಪಾರ್ಕ್ ಬದಲು ಸರ್ಕಾರ ಕೃಷಿ ಕಾಲೇಜು, ಕೃಷಿ ವಿಶ್ವವಿದ್ಯಾಲಯವಾದರೂ ಸ್ಥಾಪಿಸಬೇಕು. ತೊಗರಿ ಬೆಳೆ ಪ್ರದೇಶ ಹೆಚ್ಚಳವಾಗಿದೆ. ಕಲಬುರಗಿ ಬಿಟ್ಟು ಬೀದರ್, ಬೆಳಗಾವಿ, ವಿಜಯಪುರ, ರಾಯಚೂರು, ಚಿತ್ರದುರ್ಗದ ಸೇರಿದಂತೆ ದಕ್ಷಿಣದ ಕೆಲ ಜಿಲ್ಲೆಗಳ ತನಕ ತೊಗರಿ ಬೆಳೆಯಲಾಗುತ್ತಿದೆ. ಬೇಳೆಕಾಳು, ಎಣ್ಣೆಕಾಳು ಈಗಲೂ ನಮ್ಮ ದೇಶ ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ಹೊಸ ಹೊಸ ತಳಿಗಳನ್ನು ಸಂಶೋಧಿಸಿ ರೈತರಿಗೆ ಕೊಟ್ಟರೆ, ಸಮೃದ್ಧವಾಗಿ ಧಾನ್ಯಗಳನ್ನು ಬೆಳೆದು, ಮಾಡುತ್ತಿರುವ ಆಮದನ್ನು ನಿಲ್ಲಿಸಬಹುದು ಎಂದು ಬಿ.ಆರ್.ಪಾಟೀಲ್ ಅಭಿಪ್ರಾಯಪಟ್ಟರು.