ಕಲಬುರಗಿ: ಆರ್‌ಸಿಬಿ ಗೆಲುವಿನ ವೇಳೆ ನಡೆದ ಸಂಭ್ರಮಾಚರಣೆಯಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರೇ ನೇರ ಹೊಣೆಯಾಗಿದ್ದಾರೆ. ಅವರ ಮತ್ತು ಸಚಿವರ ಮಕ್ಕಳ ಕ್ರಿಕೆಟ್ ಹುಚ್ಚಿಗೆ 11 ಜನರ ಪ್ರಾಣ ಹೋಗಿದೆ. ವಿಧಾನಸೌಧದ ಕಾರ್ಯಕ್ರಮದ ಬಳಿಕ ಕ್ರೀಡಾಂಗಣಕ್ಕೆ ನುಗ್ಗಿದಾಗಲೇ ಅಮಾಯಕರ ಸಾವು ಸಂಭವಿಸಿವೆ. ಇದೇ ಕಾರಣ ಮುಂದಿಟ್ಟುಕೊಂಡು ಪೊಲೀಸ್ ಅಧಿಕಾರಿಗಳನ್ನು ಅಮಾನತ್ತುಗೊಳಿಸಿರುವ ಕ್ರಮ ಸರಿಯಲ್ಲ. ಈ ದುರ್ಘಟನೆಗೆ ಸಿಎಂ ಮತ್ತು ಡಿಸಿಎಂ ಅವರೇ ಕಾರಣರಾಗಿದ್ದಾರೆ. ಇದರ ಬಗ್ಗೆ ಸಾರ್ವಜನಿಕ ಚರ್ಚೆಗೆ ಬರುವುದಾದರೆ ನಾನು ಸಿದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸವಾಲು ಹಾಕಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕಾಲ್ತುಳಿತ ಪ್ರಕರಣಕ್ಕೂ ಮತ್ತು ವಿಮಾನ ದುರಂತದ ಪ್ರಕರಣಕ್ಕೆ ಹೋಲಿಕೆ ಮಾಡಿ ರಾಜಕಾರಣ ಮಾಡುವುದು ಸರಿಯಲ್ಲ. ವಿಮಾನ ದುರಂತಕ್ಕೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವರ ರಾಜೀನಾಮೆ ಕೇಳುವುದು ಸರಿಯಲ್ಲ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿಜಯೇಂದ್ರ, ಕೇಂದ್ರ ಸರಕಾರ ಪರ ಸಮರ್ಥನೆ ಮಾಡಿಕೊಂಡರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್.ಡಿ.ಎ ಸರಕಾರ ಎರಡು ಅವಧಿಗಳಲ್ಲಿ ಉತ್ತಮ ಕೆಲಸ ಮಾಡಿ, ಇದೀಗ ಮೂರನೇ ಅವಧಿಯಲ್ಲಿ ಭಾರತ ದೇಶವನ್ನು ಜಗತ್ತಿನ ಬಲಾಢ್ಯ ಆರ್ಥಿಕ ರಾಷ್ಟ್ರಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದೆ. ಇಂತಹ ಸಾಧನೆಗೆ ಸಿಎಂ ಸಿದ್ದರಾಮಯ್ಯ ಅವರ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ 11 ವರ್ಷದಲ್ಲಿ ದೇಶದಲ್ಲಿ ಕುಡಿಯುವ ನೀರು, ಹಳ್ಳಿ ಹಳ್ಳಿಗೆ ವಿದ್ಯುತ್ ಸರಬರಾಜು, ಆಹಾರ ಉತ್ಪಾದನೆ, ರಸ್ತೆ ನಿರ್ಮಾಣ ಸೇರಿದಂತೆ ಇತರ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಕೇಂದ್ರ ಸರಕಾರ ಶ್ರಮಿಸಿದೆ. ಹಾಗಾಗಿಯೇ 11 ವರ್ಷ ಹಿಂದೆ ಆರ್ಥಿಕವಾಗಿ 11 ಸ್ಥಾನದಲ್ಲಿದ್ದ ಭಾರತವು ಈಗ 4ನೇ ಸ್ಥಾನಕ್ಕೇರಿದೆ. ಸಿದ್ದರಾಮಯ್ಯ ಅವರು ನೀಡಿರುವ 0 ಅಂಕ ನಮಗೆ ಬೇಕಿಲ್ಲ, ದೇಶದಲ್ಲಿ ಅಭಿವೃದ್ಧಿ ಆಗುತ್ತಿರುವುದರ ಕುರಿತು ಜನರು ಗಮನಿಸುತ್ತಿದ್ದಾರೆ ಎಂದರು.
ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಬಳಿಕ ರಾಜ್ಯ ಸರಕಾರ ಕೋಮು ನಿಗ್ರಹ ದಳ ಸ್ಥಾಪಿಸಿದೆ. ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ವ್ಯವಸ್ಥೆಯನ್ನು ಸುವ್ಯವಸ್ಥೆಯೆಡೆಗೆ ತರುವ ಉದ್ದೇಶದಿಂದ ಸರ್ಕಾರ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಕೋಮು ನಿಗ್ರಹ ದಳ ಸ್ಥಾಪಿಸುವುದರ ಹಿಂದೆ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರನ್ನು ಹೆದರಿಸುವ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸರಕಾರದವರು ಏನೇ ಷಡ್ಯಂತ್ರ ನಡೆಸಿದರೂ ಹಿಂದೂ ಮತ್ತು ಬಿಜೆಪಿ ಕಾರ್ಯಕರ್ತರು ಓಡಿಹೋಗದೆ ಅವರಿಗೆ ಎದುರಿಸುವ ಶಕ್ತಿ ಇದೆ ಎನ್ನುವುದನ್ನು ಮರೆಯಬಾರದು ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ಚಂದು ಪಾಟೀಲ್, ಶಶೀಲ್ ನಮೋಶಿ, ಬಸವರಾಜ್ ಮತ್ತಿಮಡು, ಬಿಜಿ ಪಾಟೀಲ್, ಸುಭಾಶ್ ಗುತ್ತೇದಾರ್, ಬಾಬುರಾವ್ ಚವ್ಹಾಣ್, ಸುನೀಲ್ ವಲ್ಯಪುರೆ, ಅವಿನಾಶ್ ಜಾಧವ್, ಅಮರನಾಥ್ ಪಾಟೀಲ್, ಹರ್ಷ ಗುತ್ತೇದಾರ್, ನಿತಿನ್ ಗುತ್ತೇದಾರ್, ಅವ್ವಣ್ಣಾ ಮ್ಯಾಕೇರಿ, ಮಾಳವಿಕಾ ಅವಿನಾಶ್ ಸೇರಿದಂತೆ ಮತ್ತಿತರರು ಇದ್ದರು.