ಕಲಬುರಗಿ| ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಿ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಖಡಕ್ ವಾರ್ನಿಂಗ್

Date:

Share post:

ಕಲಬುರಗಿ: ಜಿಲ್ಲೆಯಲ್ಲಿ ಎಲ್ಲಿಯೂ ಅಕ್ರಮವಾಗಿ ಮರಳು ದಂಧೆ ನಡೆಯದಂತೆ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ನಿರ್ಲಕ್ಯ ವಹಿಸುವ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಅನಿವಾರ್ಯ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಟಾಸ್ಕ್ ಫೋರ್ಸ್ ಸಮಿತಿಯ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಲವು ಬಾರಿ ಸೂಚನೆ ನೀಡಿದ್ದರೂ ಅಕ್ರಮ ಮರಳು ಸಾಗಾಟ ನಿರಂತರವಾಗಿ ನಡೆಯುತ್ತಿರುವುದೇಕೆ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಅವರು, ಅಧಿಕಾರಿಗಳಿಗೆ ಮಾಹಿತಿ ಇಲ್ಲದೆ ಈ ದಂಧೆ ನಡೆಯುತ್ತಿದಿಯೇ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು. ಕೂಡಲೆ ಇದಕ್ಕೆ ಕಡಿವಾಣ ಹಾಕಬೇಕು. ಇನ್ನು ಈ ವಿಷಯದಲ್ಲಿ ಶೂನ್ಯ ಸಹಿಷ್ಣುತೆ ಸಹ ಸಹಿಸುವುದಿಲ್ಲ ಎಂದರು.

ಪಟ್ಟಾ ಜಮೀನಿನಲ್ಲಿ ಮರಳು ಸ್ಟಾಕ್ ಮಾಡುತ್ತಿರುವ ಪ್ರಕರಣಗಳು ನಮ್ಮ ಕಣ್ಮುಂದಿದ್ದರೂ ಜಮೀನು ಮಾಲೀಕರ ಮೇಲೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುತ್ತಲೆ ಗರಂ ಆದ ಜಿಲ್ಲಾಧಿಕಾರಿಗಳು, ಕೂಡಲೆ ಅಂತಹ ಅಕ್ರಮ ಮರಳು ವಶಕ್ಕೆ ಪಡೆದು, ಮಾಲೀಕರ ಮೇಲೆ ಮುಲಾಜಿಲ್ಲದೆ ಎಫ್.ಐ.ಆರ್. ದಾಖಲಿಸಬೇಕು ಎಂದ ಅವರು, ಇನ್ನು ಪ್ರಸ್ತುತ ಜಿಲ್ಲೆಯಾದ್ಯಂತ ಕಾನುನುಬದ್ಧ ಮರಳು ಗಣಿಗಾರಿಕೆಯು ಸಹ ನಿಲ್ಲಿಸಿರುವುದರಿಂದ ಮರಳು ಸಂಗ್ರಹ ಪ್ರದೇಶ ಸುತ್ತ ಫೆನ್ಸಿಂಗ್ ಮೂರು ದಿನದೊಳಗೆ ಹಾಕಬೇಕು ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟರು.

ತಾಲೂಕಾ ಹಂತದಲ್ಲಿ ಸಹಾಯಕ ಆಯುಕ್ತರ ನೇತೃತ್ವದ ಟಾಸ್ಕ್ ಫೋರ್ಸ್ ಕಮಿಟಿಯು ಕಾಲ-ಕಾಲಕ್ಕೆ ಸಭೆ ಕರೆದು ಎಲ್ಲಾ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದಲ್ಲಿ ಅಕ್ರಮ ಮರಳು ಚಟುವಟಿಕೆ ನಿಲ್ಲಿಸಬಹುದಾಗಿದೆ. ಅಕ್ರಮ ಪ್ರಕರಣ ಎಲ್ಲಿಯೇ ವರದಿಯಾದಲ್ಲಿ ದಂಡ ವಸೂಲಿ ಜೊತೆಗೆ ಪ್ರಕರಣ ಸಹ ದಾಖಲಾಗಬೇಕು. ದಂಡದ ರಸೀದಿ ಹರಿದು ಕೈ ತೊಳೆದುಕೊಳ್ಳುವಂತಿಲ್ಲ. ಇನ್ನು ತಾಲೂಕಾ ಸಮಿತಿಯ ಎಲ್ಲಾ ಸದಸ್ಯರು ಸಮಾನ ಜವಾಬ್ದಾರಿ ಹೂರಬೇಕು ಮತ್ತು ಸಮನ್ವಯುತೆಯಿಂದ ಸಕ್ರಿಯವಾಗಿ ಕಾರ್ಯನಿರ್ಚಗಿಸಿದಲ್ಲಿ ಅಕ್ರಮ‌ ಮರಳು ದಂಧೆ ನಿಯಂತ್ರಣ ಸಾಧ್ಯ ಎಂದರು.

ಅಕ್ರಮ ಮರಳು ವಶಪಡಿಸಿಕೊಂಡ ನಂತರ ಅದನ್ನು ನಿಗದಿತ ಸ್ಥಳದಲ್ಲಿ ಸಂಗ್ರಹಿಸಿ ಸಾರ್ವಜನಿಕರಿಗೆ ಡಿ.ಎಸ್.ಆರ್ ದರದಂತೆ ಮತ್ತು ಗುತ್ತಿಗೆದಾರರಿಗೆ ಹರಾಜಿನ ಮೂಲಕ ವಿಲೇವಾರಿ ಮಾಡುವ ನೂತನ ವ್ಯವಸ್ಥೆ ಜಾರಿಗೆ ತರಬೇಕು, ಈ ಕುರಿತು ಸಾರ್ವಜನಿಕವಾಗಿ ಮೊದಲೆ ಮಾಹಿತಿ ನೀಡಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಸೋಮಶೇಖರ್ ಅವರಿಗೆ ನಿರ್ದೇಶನ ನೀಡಿದ ಡಿ.ಸಿ. ಅವರು, ಮುಂದಿನ 15 ದಿನಗಳ ನಂತರ ಮತ್ತೆ ಸಭೆ ಕರೆದು ಇಂದಿನ ಸಭೆಯ ನಾಡವಳಿ ಅನುಷ್ಠಾನದ ಕುರಿತು ಪರಾಮರ್ಶೆ ಮಾಡಲಾಗುವುದೆಂದರು.

ಗಣಿಗಾರಿಕೆ ಸ್ಥಳಕ್ಕೆ ಭೇಟಿ ಕೊಡಿ:

ತಾಲೂಕಾ ಮಟ್ಟದ ಟಾಸ್ಕ್ ಫೋರ್ಸ್ ಕಮಿಟಿ ಸದಸ್ಯರು ಆಗಾಗ ತಮ್ಮ ತಾಲೂಕಿನ ವ್ಯಾಪ್ತಿಯ ಮರಳು ಗುತ್ತಿಗೆ ಲೈಸೆನ್ಸ್ ಪಡೆದ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿ ಕಾನೂನು ಉಲ್ಲಂಘನೆಯಾಗದಿರುವ ಕುರಿತು ಪರಿಶೀಲಿಸಬೇಕು. ಮರಳು ಸಾಗಾಟ ತಪಾಸಣೆಗೆಂದೆ ಪ್ರತ್ಯೇಕ ಚೆಕ್ ಪೋಸ್ಟ್ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಹಾಕುವ ಅವಶ್ಯಕತೆ ಇದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಮತ್ತು ಎಸ್.ಪಿ. ಅಡ್ಡೂರು ಶ್ರೀನಿವಾಸಲು ತಿಳಿಸಿದರು.

6.17 ಕೋಟಿ ರಾಜಸ್ವ ಸಂಗ್ರಹ:

ಜಿಲ್ಲೆಯಾದ್ಯಂತ ಕಾನೂನುಬದ್ಧ ಮರಳು ಗಣಿಗಾರಿಕೆಯಿಂದ 2023-24 ಹಾಗೂ 2024-25ನೇ ಸಾಲಿನಲ್ಲಿ ಒಟ್ಟಾರೆ 7.72 ಲಕ್ಷ ಮೆಟ್ರಿಕ್ ಟನ್ ಮರಳು ಮಾರಾಟದಿಂದ 9.08 ಕೋಟಿ ರೂ. ರಾಜಸ್ವ ಸಂಗ್ರಹವಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮಿತ ತಪಾಸಣೆ ಪರಿಣಾಮ 2024-25ರಲ್ಲಿ 179 ಅಕ್ರಮ ಮರಳು ಸಾಗಾಣಿಕೆ ಪ್ರಕರಣಗಳನ್ನು ಪತ್ತೆ ಹಚ್ಚಿ 123 ಪ್ರಕರಣಗಳಲ್ಲಿ 44.36 ಲಕ್ಷ ರೂ. ದಂಡ ವಿಧಿಸಿ ಒಂದು ಪ್ರಕರಣದಲ್ಲಿ ಮೊಕದಮ್ಮೆ ದಾಖಲಿಸಿದೆ. ಅದೇ ರೀತಿ ಒಂದು ಅಕ್ರಮ ಮರಳ ಸಂಗ್ರಹಣೆ ಪ್ರಕರಣದಲ್ಲಿಯೂ ಎಫ್.ಐ.ಆರ್. ದಾಖಲಿಸಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಸೋಮಶೇಖರ್ ಎಂ. ಸಭೆಗೆ ಮಾಹಿತಿ ನೀಡಿದರು.

ಇದಲ್ಲದೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಡಿ 160 ಪ್ರಕರಣಗಳು ದಾಖಲಾಗಿವೆ. ಆರ್.ಟಿ.ಓ ದಿಂದ ಕಳೆದ ವರ್ಷದಲ್ಲಿ 3,291 ವಾಹನ ಪರಿಶೀಲಿಸಿ 159 ಪ್ರಕರಣ ದಾಖಲಿಸಿ 39.83 ಲಕ್ಷ ರೂ. ಮತ್ತು ಕಂದಾಯ ಇಲಾಖೆಯಿಂದ 6.40 ಲಕ್ಷ ರೂ. ದಂಡ ವಸೂಲಿ ಮಾಡಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಡಿ.ಸಿ.ಪಿ ಕನಿಕಾ ಸಿಕ್ರಿವಾಲ್, ಸಹಾಯಕ ಆಯುಕ್ತ ಪ್ರಭುರೆಡ್ಡಿ, ಲೋಕೋಪಯೋಗಿ ಇಲಾಖೆ ಇ.ಇ. ಸುಭಾಷ ಸೇರಿದಂತೆ ತಾಲೂಕಿನ ತಹಶೀಲ್ದಾರರು, ತಾಲೂಕಾ ಪಂಚಾಯತ್ ಇ.ಓ.ಗಳು, ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಪರಿಸರ ಸ್ನೇಹಿ ಮಣ್ಣಿನ ಗಣಪ ಪ್ರತಿಷ್ಠಾಪಿಸಿ: ಜಿಲ್ಲಾಧಿಕಾರಿ ಬಿ.ಫೌಜಿಯಾ

ಕಲಬುರಗಿ: ಸೂಫಿ-ಸಂತರ ನಾಡು ಕಲಬುರಗಿ ಶಾಂತಿ-ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಗಣೇಶ ಚತುರ್ಥಿ ಮತ್ತು...

ಕಲಬುರಗಿ| ಅತೀವೃಷ್ಟಿ ಪೀಡಿತ ಪ್ರದೇಶ ಘೋಷಿಸುವಂತೆ ಮಲ್ಲಿನಾಥ ನಾಗನಹಳ್ಳಿ ಆಗ್ರಹ

ಕಲಬುರಗಿ: ಕೋಟನೂರ್, ನಾಗನಹಳ್ಳಿ, ಉದನೂರು, ನಂದಿಕೂರ್, ಸೀತನೂರ್ ಹಾಗೂ ಕಲಬುರ್ಗಿ ದಕ್ಷಿಣ...

ಕಲಬುರಗಿ| ಮಳೆಯಿಂದ ಬೆಳೆ ನಷ್ಟ, ಬಾವಿಯಲ್ಲೇ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಕಲಬುರಗಿ: ಜಿಲ್ಲೆಯಲ್ಲಿ ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ....

ಕಲಬುರಗಿ| ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಜಯ; ಕೈ ತೆಕ್ಕೆಗೆ ಕಾಳಗಿ ಪಟ್ಟಣ ಪಂಚಾಯತ್ 

ಕಲಬುರಗಿ: ಕಾಳಗಿ ಪಟ್ಟಣ ಪಂಚಾಯತ್ ನ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ 11...