ಕಲಬುರಗಿ: ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ಪಟ್ಟಣ ಸೇರಿದಂತೆ ಪ್ರತಿಯೊಂದು ಹಳ್ಳಿಗಳಲ್ಲೂ ಅಕ್ರಮ ಮದ್ಯ ಮಾರಾಟ ಜೋರಾಗಿದೆ, ಇದರಿಂದ ಅನೇಕ ಕುಟುಂಬಗಳು ಬೀದಿಗೆ ಬರುತ್ತಿವೆ. ಸರಕಾರ ಹಾಗೂ ಅಧಿಕಾರಿಗಳು ಬೇಗನೆ ಗಮನಹರಿಸಿ ಅಕ್ರಮ ಮಧ್ಯ ಮಾರಾಟವನ್ನು ಸಂಪೂರ್ಣವಾಗಿ ಕಡಿವಾಣ ಹಾಕಬೇಕು, ಅಲ್ಲದೆ ಇತ್ತೀಚೆಗೆ ದಾಖಲಿಸಿದ್ದ ಸುಳ್ಳು ಪ್ರಕರಣವನ್ನು ಕೂಡಲೇ ಕೈಬೀಡಬೇಕೆಂದು ಆಗ್ರಹಿಸಿ, ಜೇವರ್ಗಿಯ ವಿವಿಧ ಸಂಘಟನೆಗಳಿಂದ ಒತ್ತಾಯಿಸಲಾಯಿತು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಾಮಾಜಿಕ ನ್ಯಾಯ ಮತ್ತು ಜನಪರ ಹೋರಾಟಗಾರರ ವೇದಿಕೆ ಹಾಗೂ ತಾಲೂಕಿನ ವಿವಿ ಸಂಘಟನೆಗಳ ಮುಖಾಂತರ ಮಂಗಳವಾರ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟಗಾರ ರವಿಚಂದ್ರ ಗುತ್ತೆದಾರ, ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿ ನಡೆಯುತ್ತಿದೆ. ಗ್ರಾಮಗಳಲ್ಲಿ ಕಿರಾಣಾ ಅಂಗಡಿ, ಹೊಟೆಲ್, ಪಾನ್ ಶಾಪ್, ಧಾಭಾಗಳಲ್ಲಿ ಹಾಗೂ ಕೆಲವು ಮನೆಗಳಲ್ಲು ಕೂಡ ಅಕ್ರಮ ಮದ್ಯ ಮಾರಾಟವನ್ನು ನಡೆಸಲಾಗುತ್ತಿದೆ. ತಾಲೂಕಿನ ಕೋಣಸಿರಸಗಿ, ಮಂದೆವಾಲ, ರೇವನೂರ, ಕೋಳಕೂರ, ಆಲೂರ, ಚಿಗರಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಅಕ್ರಮ ಮಧ್ಯ ಮಾರಾಟವು ಯಾರ ಭಯವಿಲ್ಲದೆ ರಾಜಾರೋಷವಾಗಿ ಮಾರಾಟ ನಡೆದಿದೆ. ಕೂಡಲೇ ಸರ್ಕಾರ ಇದಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇತ್ತೀಚೆಗೆ ಮದ್ಯ ನಿಲ್ಲಿಸಿ ಹೋರಾಟ ನಡೆಸಿದ ವೇಳೆ ಹೋರಾಟಗಾರರ ಹಾಗೂ ಮಹಿಳೆಯರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಹೋರಾಟಗಾರರನ್ನ ಹತ್ತಿಕುವ ಹುನ್ನಾರವನ್ನು ನಿಲ್ಲಿಸಬೇಕು, ಸುಳ್ಳು ದೂರು ನೀಡಿದ ಅಧಿಕಾರಿಯನ್ನು ಅಮಾನತು ಮಾಡಬೇಕು, ಸುಳ್ಳು ಪ್ರಕರಣ ದಾಖಲಿಸಿದನ್ನ ಕೈಬಿಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಜೇವರ್ಗಿ ಬಂದ್ ಮಾಡುವುದರ ಮೂಲಕ ಉಗ್ರವಾದ ಪ್ರತಿಭಟನೆಯನ್ನ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮಾತನಾಡಿ, ಜೇವರ್ಗಿ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟವನ್ನು ತಡೆಯುವಂತೆ ಹೋರಾಟ ಮಾಡಿದವರ ಮೇಲೆ ಪ್ರಕರಣ ದಾಖಲಿಸುವುದು ಸರಿಯಲ್ಲ. ಕೂಡಲೇ ಪ್ರಕರಣವನ್ನು ಹಿಂಪಡೆಯಬೇಕು. ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಿವರಾಜ ಪಾಟೀಲ್ ರದ್ದೆವಾಡಗಿ, ಬಸವರಾಜ ಪಡಕೋಟಿ, ಚಂದ್ರಶೆಖರ ಹರನಾಳ, ಭಿಮರಾಯ ನಗನೂರ, ಶ್ರವಣಕುಮಾರ ನಾಯಕ, ಬಸವರಾಜ ಬಾಗೇವಾಡಿ, ಸತೀಶ ಜಾಹಗಿರದಾರ, ಪರಮೇಶ್ವರ ಬಿರಾಳ, ಭಿಮಾಶಂಕರ್ ಬಿಲ್ಲಾಡ, ಚಂದ್ರಶೇಖರ ಮಲ್ಲಾಬಾದ, ಗೀರಿಶ ತುಂಬಗಿ, ಸಿದ್ರಾಮ ಕಟ್ಟಿ, ರವಿ ಕುಳಗೇರಿ, ಬಸವರಾಜ ಇಂಗಳಗಿ, ಮಲ್ಲಣಗೌಡ ನಂದಿಹಳ್ಳಿ, ಮಾಹಾಂತೇಶ ಆದಿಮನಿ, ಮಾಹಂತಗೌಡ ನಂದಿಹಳ್ಳಿ, ಸಿದ್ದು ಕೇರೂರ, ಶ್ರೀಹರಿ ಕರಕಳ್ಳಿ, ಸೈಬಗೌಡ ಯಡ್ರಾಮಿ, ಶರಣಗೌಡ ಹಾಲಗಡ್ಲಾ, ವಿಶ್ವರಾಧ್ಯ ಗಂವ್ಹಾರ, ಮಾಪಣ್ಣ ಕಟ್ಟಿ, ಇಬ್ರಾಹಿಂ ಪಟೇಲ್, ಮಲ್ಲಿಕಾರ್ಜುನ ಬಿರಾದಾರ, ಪರಮಾನಂದ ಯಲಗೋಡ, ದೇವಕ್ಕಿ ಯಾಳವಾರ, ಬಾಗೇಶ ಸರನಾಳ, ಭೀಮು ಖಾದ್ಯಾಪೂರ, ಪ್ರಕಾಶ ಮಾರಡಗಿ, ಸೇರಿದಂತೆ ಅನೇಕ ಹೋರಾಟಗಾರರು ಹಾಗೂ ವಿವಿಧ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.