ಕಲಬುರಗಿ: ಕಲಬುರಗಿಯಲ್ಲಿ ರಾಷ್ಟ್ರಕೂಟರ ಮತ್ತು ಅಮೋಘವರ್ಷ ನೃಪತುಂಗರ ಹೆಸರು ಅಜರಾಮರವಾಗಿ ಉಳಿಯಲು ಮತ್ತು ಅವರ ಅಸ್ತಿತ್ವ-ನೆನಪು ಜೀವಂತಾಗಿಡಲು ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ರಾಷ್ಟ್ರಕೂಟ ಚಕ್ರವರ್ತಿ ‘ಅಮೋಘವರ್ಷ ನೃಪತುಂಗ ಬಸ್ ನಿಲ್ದಾಣ’ ಎಂದು ನಾಮಕರಣ ಮಾಡಬೇಕೆಂದು ಕಲ್ಯಾಣ ನಾಡು ವಿಕಾಸ ವೇದಿಕೆ ಒತ್ತಾಯಿಸಿದೆ.
ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರ ಮೂಲಕ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿರುವ ವೇದಿಕೆಯ ಪದಾಧಿಕಾರಿಗಳು ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಮತ್ತು ವಿಭಾಗೀಯ ಕೇಂದ್ರ ಕಲಬುರಗಿ ಜಿಲ್ಲೆಯ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಕರ್ನಾಟಕದ ಕೆ.ಎಸ್.ಆರ್.ಟಿ.ಸಿ. ಬಿ.ಎಂ.ಟಿ.ಸಿ ಮತ್ತು ಎನ್.ಡಬ್ಲೂ.ಕೆ.ಆರ್.ಟಿ.ಸಿ ಸಾರಿಗೆ ನಿಗಮಗಳ ಬಸ್ಸಿನಲ್ಲಿ ಆನ್‌ಲೈನ್ ಪಾವತಿ ಸೌಲಭ್ಯ ಜಾರಿಯಲ್ಲಿದ್ದು, ಹಿಂದುಳಿದ ಭಾಗದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಮಾತ್ರ ಇದುವರೆಗೂ ಆನ್‌ಲೈನ್ ಪಾವತಿ ಸೌಲಭ್ಯ ಇಲ್ಲದಿರುವುದು, ಕಲ್ಯಾಣ ಕರ್ನಾಟಕದ ಮಲತಾಯಿ ಧೋರಣೆಗೆ ರಾಜ್ಯ ಸರ್ಕಾರದ ಸಾಕ್ಷಿಯಾಗಿದೆ. ಕಲ್ಯಾಣದ ಸಾರಿಗೆ ಬಸ್ಸುಗಳಲ್ಲಿ ಆನ್‌ಲೈನ್ ಪಾವತಿ ಸೌಲಭ್ಯ ಜಾರಿಗೆಯಿಂದ ಪ್ರಯಾಣಿಕರಿಗೆ ಮತ್ತು ನಿರ್ವಾಹಕರಿಗೆ ತುಂಬಾ ಅನುಕೂಲ ಆಗುತ್ತದೆ. ಕೂಡಲೇ ಈ ಸೌಲಭ್ಯವನ್ನು ಕಲ್ಯಾಣದ ಸಾರಿಗೆಗಳಲ್ಲಿ ಜಾರಿಗೆ ತರಬೇಕು ಎಂದು ಒತ್ತಡ ಹೇರಿದರು.
ರಾಜ್ಯದ ಪ್ರಸಿದ್ಧ ಯಾತ್ರಾ-ಪ್ರವಾಸಿ ಸ್ಥಳಗಳಾದ ಹಂಪೆ, ಅಂಜನಾದ್ರಿ ಬೆಟ್ಟ (ಆನೆಗುಂದಿ), ಬದಾಮಿ, ಸವದತ್ತಿ, ಕಾರವಾರ, ದಾಂಡೇಲಿ, ಯಲ್ಲಾಪುರ, ಶಿರಸಿ, ಗೋಕರ್ಣ, ಮುರಡೇಶ್ವರ, ಹೊನ್ನಾವರ, ಜೋಗ, ಆಗುಂಬೆ, ಉಡುಪಿ, ಕುಂದಾಪುರ, ಕೊಲ್ಲುರು, ಶ್ರೀಂಗೇರಿ, ಹೊರನಾಡು, ಕುದರೆಮುಖ, ಚಿಕ್ಕಮಗಳೂರು, ಕುಕ್ಕೆ ಸುಬ್ರಮಣ್ಯ, ಮೂಡಬಿದ್ರಿ, ಮಡಿಕೇರಿ, ಸಕಲೇಶಪೂರ, ಬೇಲೂರು-ಹಳೇಬೀಡು, ಹಾಸನ, ಶ್ರವಣ ಬೆಳಗೋಳ, ಚಿತ್ರದುರ್ಗ ಸ್ಥಳಗಳಿಗೆ ಕಲಬುರಗಿಯಿಂದ ನೇರ ಬಸ್ಸಿನ ಸಂಪರ್ಕ ವ್ಯವಸ್ಥೆ ಇಲ. ಹಾಗಾಗಿ ಇದನ್ನು ಕಲ್ಪಿಸುವುದರ ಮೂಲಕ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್. ನಡಗೇರಿ, ಜಿಲ್ಲಾಧ್ಯಕ್ಷ ಬಾಬು ಮದನಕರ, ಮುಖಂಡರಾದ ಜೈ ಭೀಮ ಮಾಳಗೆ, ಮೋಹನ ಸಾಗರ, ಪ್ರವೀಣ ಖೇಮನ, ಮಲ್ಲು ಸಂಕನ, ದತ್ತು ಜಮಾದಾರ, ಮಲ್ಲಿಕಾರ್ಜುನ ದೊರೆ, ಲಕ್ಷ್ಮಣ ಅಳ್ಳಗಿ ಹಾಗೂ ಇತರರು ಇದ್ದರು.